ನವದೆಹಲಿ, ಮೇ 31 (DaijiworldNews/DB): ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಂದು ಬಂಧನಕ್ಕೊಳಪಟ್ಟಿರುವ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರನ್ನು ಜೂನ್ 9 ರವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ಒಪ್ಪಿಸಲಾಗಿದೆ.
ಕೋಲ್ಕತ್ತಾ ಮೂಲದ ಸಂಸ್ಥೆಯೊಂದಿಗೆ 2015-16ರಲ್ಲಿ ಹವಾಲಾ ವ್ಯವಹಾರದಲ್ಲಿ ಸತ್ಯೇಂದ್ರ ಜೈನ್ ಭಾಗಿಯಾಗಿದ್ದಾರೆ ಎಂದು ಹಣಕಾಸು ಅಪರಾಧಗಳ ತನಿಖೆ ನಡೆಸುತ್ತಿರುವ ತನಿಖಾ ಸಂಸ್ಥೆಯು ಆರೋಪಿಸಿತ್ತು. ಸಚಿವರು ಮತ್ತವರ ಕುಟುಂಬದ ವಿರುದ್ಧ ಸಿಬಿಐಯು ಆಗಸ್ಟ್ 2017ರಲ್ಲಿ 1.62ರೂ. ಕೋಟಿ ರೂ.ವರೆಗಿನ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಪ್ರಕರಣ ದಾಖಲು ಮಾಡಿಕೊಂಡಿತ್ತು.
ಯಾವುದೇ ವ್ಯಾವಹಾರಿಕ ದಾಖಲೆಗಳಿಲ್ಲದೆ ನಾಲ್ಕು ಶೆಲ್ಗಳನ್ನು ಸ್ಥಾಪಿಸಿ ಸಚಿವರು ಮತ್ತವರ ಕುಟುಂಬ 2011-12 ರಲ್ಲಿ 11.78 ಕೋಟಿ ರೂ. ಮತ್ತು 2015-16 ರಲ್ಲಿ 4.63 ಕೋಟಿ ರೂ. ವರ್ಗಾವಣೆ ಮಾಡಿತ್ತು ಎಂದು ಆರೋಪಿಸಲಾಗಿತ್ತು. ಹೀಗಾಗಿ ಕಳೆದೆರಡು ತಿಂಗಳ ಹಿಂದೆ ಸತ್ಯೇಂದ್ರ ಜೈನ್ ಮತ್ತು ಅವರ ಕುಟುಂಬದ ಒಡೆತನದ 4.81 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿತ್ತು. ಇದೀಗ ಮಂಗಳವಾರ ಅವರ ಬಂಧನವಾಗಿದೆ.