ದಾವಣಗೆರೆ, ಮೇ 31 (DaijiworldNews/DB): ಆರೆಸ್ಸೆಸ್ ಕಾರಣದಿಂದಾಗಿಯೇ ಇಂದು ಭಾರತೀಯರು ಸುರಕ್ಷಿತವಾಗಿದ್ದಾರೆ. ಆದರೆ ಕಾಂಗ್ರೆಸ್ಸಿಗರು ಈ ಬಗ್ಗೆಅರಿಯದೇ ಅನಗತ್ಯ ಮಾತನಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಸಂಸ್ಕೃತಿ, ಘನತೆ ಉಳಿಯಲು ಆರೆಸ್ಸೆಸ್ ಕಾರಣ. ಸಿದ್ದರಾಮಯ್ಯ ಅಥವಾ ಯಾರೇ ಆದರೂ ಆರೆಸ್ಸೆಸ್ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ಸಂಘದ ಚಟುವಟಿಕೆಗಳಿಂದಾಗಿ ದೇಶದ ಜನ ಸುರಕ್ಷಿತವಾಗಿದ್ದಾರೆ ಎಂದರು.
ಬಾಬ್ರಿ ಮಸೀದಿ ಕೆಡವಿದ್ದೇ ದೊಡ್ಡ ಸಾಧನೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ಗೆ ದೇಶದಲ್ಲಿ ಅಡ್ರೆಸ್ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿರುವ ಕಾರಣ ಅನಗತ್ಯ ಹೇಳಿಕೆಗಳನ್ನು ಕೊಡುತ್ತಿದೆ. ಬಾಬ್ರಿ ಮಸೀದಿ ಇದ್ದ ಸ್ಥಳದಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗುತ್ತಿರುವುದು ಐತಿಹಾಸಿಕ ಸಾಧನೆಯಾಗಿದೆ ಎಂದು ತಿಳಿಸಿದರು.
ಚುನಾವಣೆ ಯಾವುದೇ ಸಮಯದಲ್ಲಿ ಘೋಷಣೆಯಾದರೂ ಎದುರಿಸಲು ಬಿಜೆಪಿ ಸಿದ್ದವಾಗಿದೆ. ಸಿಎಂ ಬೊಮ್ಮಾಯಿಯವರ ಜನಪರ ಕಾರ್ಯಕ್ರಮ, ನಮ್ಮ ಅಭಿವೃದ್ದಿ ಕೆಲಸಗಳು ಖಂಡಿತಾ ಮತ್ತೊಮ್ಮೆ ಬಿಜೆಪಿಯ ಕೈ ಹಿಡಿಯಲಿದೆ. ದೇಶದ ಜನರಿಗೆ ಪ್ರಧಾನಿ ಮೋದಿಯವರು ಎಂಟು ವರ್ಷಗಳ ಕಾಲ ಉತ್ತಮ ಸೇವೆ ನೀಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ದೇಶದ ಗೌರವ ಹೆಚ್ಚುವಂತೆ ಮಾಡಿರುವುದು ನಮಗೆ ಪ್ಲಸ್ ಪಾಯಿಂಟ್ ಆಗಲಿದೆ ಎಂದು ಬೈರತಿ ಬಸವರಾಜ್ ವಿವರಿಸಿದರು.