ಹುಬ್ಬಳ್ಳಿ, ಮೇ 31 (DaijiworldNews/DB): ಪಠ್ಯ ಪುಸ್ತಕವನ್ನು ನೋಡದೆ ಭಗತ್ ಸಿಂಗ್, ನಾರಾಯಣ ಗುರು ಪಠ್ಯ ಕೈ ಬಿಡಲಾಗಿದೆ ಎಂದು ವಿವಾದ ಎಬ್ಬಿಸುತ್ತಿರುವ ಕೆಲವರು ಮಹಾಪುರುಷರ ಹೆಸರಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಚುನಾವಣೆ ಹತ್ತಿರದಲ್ಲಿರುವುದರಿಂದ ಪ್ರತಿ ವಿಚಾರದಲ್ಲಿಯೂ ವಿವಾದ ಸೃಷ್ಟಿಸುವ ಯತ್ನ ನಡೆಯುತ್ತಿದೆ. ಚುನಾವಣಾ ಗಿಮಿಕ್ಗಾಗಿ ಇದನ್ನೆಲ್ಲಾ ಮಾಡುತ್ತಿದ್ದಾರೆ. ಪಠ್ಯ ಪುಸ್ತಕ ನೋಡಿ ಮಾತನಾಡಿ ಎಂದು ಈಗಾಗಲೇ ಸಮಿತಿ ಅಂತಹವರಿಗೆ ಆಹ್ವಾನ ನೀಡಿದೆ. ಜನರು ಬಿಜೆಪಿ ವಿಚಾರಧಾರೆಗಳನ್ನು ಒಪ್ಪುತ್ತಿರುವುದರಿಂದ ಬೇರೆ ದಾರಿಯಿಲ್ಲದೆ ಕೆಲವರು ವೃಥಾ ವಿವಾದಗಳನ್ನು ಹುಟ್ಟು ಹಾಕುತ್ತಿದ್ದಾರೆ ಎಂದವರು ಆಪಾದಿಸಿದರು.
ಒಳ್ಳೆಯ ವಿಚಾರಗಳನ್ನು ಸ್ವೀಕರಿಸುವ ಮನೋಭಾವ ಅವರಲ್ಲಿಲ್ಲ. ಅವರೇ ಕೈಬಿಟ್ಟ ವಿಷಯಗಳನ್ನೂ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿರುವುದು ದುರಂತ ಎಂದವರು ಕಾಂಗ್ರೆಸ್ ವೇಳೆ ಹರಿಹಾಯ್ದರು.
ಮಂಗಳೂರಿನ ಮಳಲಿ ಮಸೀದಿಯಲ್ಲಿ ದೇವಾಲಯ ಮಾದರಿ ಪತ್ತೆ ವಿಚಾರ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಪ್ರಹ್ಲಾದ್ ಜೋಶಿ, ಸೌಹಾರ್ದದಿಂದ ಸಮಸ್ಯೆ ಬಗೆಹರಿಸುವ ಪ್ರಯತ್ನ ಅಲ್ಲಿ ನಡೆದಿದೆ. ಹೊಸ ವಿವಾದಗಳನ್ನು ಸೃಷ್ಟಿಸದೆ, ಎಲ್ಲರೂ ಕೂಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.