ಬೆಂಗಳೂರು, ಮೇ 31 (DaijiworldNews/MS): ಗೆದ್ದಲು ಹುಳ ಇಡಿ ಮರವನ್ನೇ ಒಳಗ್ಗಿನಿಂದ ಕೊರೆದು, ಒಮ್ಮೆಲೇ ಹೆಮ್ಮರವನ್ನು ಬುಡ ಸಮೇತ ಬೀಳಿಸುತ್ತದೆ. ಈ ಕಲೆ ಸಿದ್ದರಾಮಯ್ಯ ಅವರಿಗೆ ಸಿದ್ಧಿಸಿದೆ. ಕನಕಪುರದ ಬಂಡೆಯನ್ನು ಒಳಗಿನಿಂದ ಕೊರೆಯಲಾಗುತ್ತಿದೆ. ಶೀಘ್ರದಲ್ಲೇ ಬಂಡೆ ಟೊಳ್ಳಾಗಿ, ಕುಸಿಯಲಿದೆ, ಅಸಹಾಯಕಡಿಕೆಶಿ ಮೂಕಪ್ರೇಕ್ಷಕ ಅಷ್ಟೇ ಎಂದು ಬಿಜೆಪಿ ಲೇವಡಿ ಮಾಡಿದೆ.
ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುತ್ತಿರುವ ಚುನಾವಣೆಗೆ ಎರಡನೇ ಅಭ್ಯರ್ಥಿಯಾಗಿ ಹಿರಿಯ ಕಾಂಗ್ರೆಸ್ ಮುಖಂಡ ರೆಹಮಾನ್ ಖಾನ್ ಪುತ್ರ ಮನ್ಸೂರ್ ಅಲಿ ಖಾನ್ ಅವರನ್ನು ಕಣಕ್ಕೆ ಇಳಿಸಿದ್ದು ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ " ಎರಡನೇ ಅಭ್ಯರ್ಥಿ ಹಾಕದೆ, ತಮ್ಮ ಹೆಚ್ಚುವರಿ ಮತಗಳ ಮೂಲಕ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಡಿಕೆಶಿ ರಣತಂತ್ರ ರೂಪಿಸಿದ್ದರು. ಇದನ್ನರಿತ ಸಿದ್ದರಾಮಯ್ಯ, ಡಿಕೆಶಿ ಆಪ್ತರನ್ನೇ ಎರಡನೇ ಅಭ್ಯರ್ಥಿಯಾಗಿಸಿದರು. ಅಸಹಾಯ ಕಡಿಕೆಶಿ ಈಗ, ಜೆಡಿಎಸ್ಗೆ ನೀಡಿದ ಮಾತು ಉಳಿಸಿಕೊಳ್ಳುತ್ತಾರೋ ಅಥವಾ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿಕೊಳ್ಳುತ್ತಾರೋ ಎಂದು ಪ್ರಶ್ನಿಸಿದೆ.
ಸಿದ್ದರಾಮಯ್ಯ ಅವರು ಚದುರಂಗ ಆಟದಲ್ಲಿ ಬಾರಿ ನಿಸ್ಸಿಮರು. ಡಿಕೆಶಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿ, ರಾಜನಂತೆ ಬಿಂಬಿಸಿ ಈಗ ಅವರ ಬೆಂಬಲಿಗರನ್ನೇ ಎತ್ತಿಕಟ್ಟುತ್ತಿದ್ದಾರೆ. ಡಿಕೆಶಿ, ಅಸಹಾಯಕರಾಗಿ ನಿಲ್ಲಬೇಕಷ್ಟೆ! ಪರಿಷತ್ ಚುನಾವಣೆ, ರಾಜ್ಯಸಭಾ ಚುನಾವಣೆ, ಪಕ್ಷದ ಪದಾಧಿಕಾರಿಗಳ ಪಟ್ಟಿ ಇವರೆಲ್ಲರಲ್ಲೂ ಡಿಕೆಶಿ ಅವರದ್ದು ನಾಮಕಾವಸ್ಥೆಯ ಸಹಿ ಮಾತ್ರ, ಅಧಿಕಾರದ ಛಾಪು ಕಾಣುತ್ತಲೇ ಇಲ್ಲ! ಡಿಕೆಶಿ ಅವರೇ, ನೀವು ನಿಂತ ನೆಲ ಬಿರುಕು ಬಿಡುತ್ತಿದೆ, ಪರಮೇಶ್ವರ್ ಅವರನ್ನು ನೆನಪಿಸಿಕೊಳ್ಳಿ, ಕನಕಪುರ ಜೋಕೆ ಎಂದು ಬಿಜೆಪಿ ಎಚ್ಚರಿಸಿದೆ