ಮುಂಬೈ, ಮೇ 31 (DaijiworldNews/DB): ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಕ್ಯಾಬ್ ಚಾಲಕನ ಹತ್ಯೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಾಲ್ವರು ಆರೋಪಿಗಳೊಂದಿಗೆ ಓರ್ವ ಬಾಲಕನನ್ನೂ ಕೂಡಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಕಲ್ವಾ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ವೆಂಕಟ್ ಅಂಡಾಳೆ, ಭಾನುವಾರ ಥಾಣೆ ಜಿಲ್ಲೆಯ ಖಾರ್ಡಿ ಗ್ರಾಮದಲ್ಲಿ ಮುಂಬೈ ನಿವಾಸಿ ಮೊಹಮ್ಮದ್ ಅಲಿ ಅನ್ಸಾರಿ (27) ಎಂಬ ಕ್ಯಾಬ್ ಚಾಲಕನ ಶವ ಪತ್ತೆಯಾಗಿತ್ತು. ಶವ ಸಿಕ್ಕಿದ ಜಾಗದಲ್ಲೇ ಕಾರೊಂದು ಪತ್ತೆಯಾಗಿತ್ತು. ಹೀಗಾಗಿ ಪ್ರಕರಣ ಬೇಧಿಸಲು ಮೂರು ತಂಡಗಳನ್ನು ರಚಿಸಲಾಯಿತು. ಘಟನೆ ನಡೆದು ಹತ್ತು ಗಂಟೆಯೊಳಗೆ ಆರೋಪಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಥಾಣೆಯ ನಿವಾಸಿಗಳಾದ ಹಸ್ರೂಲ್ ಅಲಿಂ ಶೇಖ್ (36), ಓಂಕಾರ್ ಕಾಸೇಕರ್ (21), ಪ್ರಶಾಂತ್ ಪೆರಿಯಾಸ್ವಾಮಿ (19) ಹಾಗೂ ಮುಂಬೈ ಸಮೀಪದ ಭಾಂಡಪ್ ಗ್ರಾಮದ ನಿವಾಸಿ ಆತೀಶ್ ಬೋಸ್ಲೇ (21) ಬಂಧಿತ ಆರೋಪಿಗಳು. ಇವರೊಂದಿಗೆ ಬಾಲಕನೋರ್ವನನ್ನೂ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ಗ್ರಾಹಕರ ಸೋಗಿನಲ್ಲಿ ಕ್ಯಾಬ್ ಬುಕ್ ಮಾಡಿದ್ದ ಆರೋಪಿಗಳು ಖಾರ್ಡಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಮೂತ್ರ ವಿಸರ್ಜನೆಯ ನೆಪ ಹೇಳಿ ಕ್ಯಾಬ್ ನಿಲ್ಲಿಸಿದ್ದಾರೆ. ಕ್ಯಾಬ್ ನಿಂತ ಕೂಡಲೇ ಚಾಲಕನ ಮೇಲೆ ಆರೋಪಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಅಲ್ಲದೆ, ಚಾಲಕನ ಬಳಿಯಿದ್ದ 2500 ರೂ. ನಗದು ಮತ್ತು ಮೊಬೈಲ್ ಕಸಿದುಕೊಂಡಿದ್ದಾರೆ. ಬಳಿಕ ಆತನನ್ನು ಕೊಲೆ ಮಾಡಿ ಖಾರ್ಡಿ ಗ್ರಾಮದ ಸೇತುವೆ ಕೆಳೆಗೆ ಮೃತದೇಹವನ್ನು ಬಿಸಾಡಿ ಹೋಗಿದ್ದರು ಎಂದು ಪೊಲೀಸ್ ಆಯುಕ್ತರು ವಿವರಿಸಿದರು. ದೈಗಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.