ಮುಂಬೈ, ಮೇ 31 (DaijiworldNews/DB): ಪತಿ ಮತ್ತು ಆತನ ಮನೆಯವರ ಹಿಂಸೆಯಿಂದ ಬೇಸತ್ತು ತನ್ನ ಆರು ಮಕ್ಕಳನ್ನು ತಾಯಿಯೊಬ್ಬಳು ಬಾವಿಗೆ ತಳ್ಳಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ನಡೆದಿದೆ. ಮಕ್ಕಳು ಸಾಯಿಸದಂತೆ ಬೇಡಿದರೂ ಕರಗದೆ ಕೃತ್ಯ ಎಸಗಿದ್ದಾಳೆ.
ಮೃತಪಟ್ಟ ಆರು ಮಕ್ಕಳು18 ತಿಂಗಳಿನಿಂದ 10 ವರ್ಷದ ಒಳಗಿನವರು ಎನ್ನಲಾಗಿದೆ. ಇಲ್ಲಿನ ಮಹಾಡ್ ತಾಲೂಕಿನ ಖರಾವಲಿ ಗ್ರಾಮದಲ್ಲಿ ಘಟನೆ ನಡೆದಿದೆ. ಪ್ರಾಣ ಉಳಿಸಿಕೊಳ್ಳಲು ಮಕ್ಕಳು ಕಿರುಚುತ್ತಿದ್ದರೂ ತಾಯಿ ಮನಸ್ಸು ಕರಗಲಿಲ್ಲ. ಮಕ್ಕಳ ಕಿರುಚಾಟ ಕೇಳಿ ಸ್ಥಳೀಯರೊಬ್ಬರು ಸ್ಥಳಕ್ಕೆ ಧಾವಿಸಿ ಮಕ್ಕಳನ್ನು ರಕ್ಷಿಸುವ ಯತ್ನ ಮಾಡಿದರಾದರೂ, ಆ ವೇಳೆಗಾಗಲೇ ಮಕ್ಕಳು ಬಾವಿಯಲ್ಲಿ ಮುಳುಗಿ ಮೃತಪಟ್ಟಿದ್ದರು.
ಈಕೆಯ ಪತಿ ಮತ್ತು ಆತನ ಮನೆಯವರು ಆಕೆಗೆ ಪ್ರತಿದಿನ ಮನೆಯಲ್ಲಿ ಕಿರುಕುಳ ನೀಡುತ್ತಿದ್ದರು. ಅಲ್ಲದೆ ದೈಹಿಕವಾಗಿಯೂ ಹಲ್ಲೆ ನಡೆಸುತ್ತಿದ್ದರು. ಇದರಿಂದ ಬೇಸತ್ತು ಕೃತ್ಯ ಎಸಗಿದ್ದಾಳೆ ಎನ್ನಲಾಗಿದೆ. ಮಕ್ಕಳ ಶವಗಳನ್ನು ರಕ್ಷಣಾ ತಂಡಗಳು ಬಾವಿಯಿಂದ ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.