ಹೈದರಾಬಾದ್, ಮೇ 31 (DaijiworldNews/MS): ಒಂದೇ ಕುಟುಂಬದ ನಾಲ್ವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದರಾಬಾದ್ನ ಹೊರವಲಯದಲ್ಲಿರುವ ನಾದರ್ಗುಲ್ ಬಳಿ ನಡೆದಿದೆ.
ಸೋಮವಾರ ತಡರಾತ್ರಿ ರಂಗಾ ರೆಡ್ಡಿ ಜಿಲ್ಲೆಯ ಕುರ್ಮಲ್ಗುಡಾದಲ್ಲಿ ದಂಪತಿ ಮತ್ತು ಅವರ ಇಬ್ಬರು ಹೆಣ್ಣು ಮಕ್ಕಳು ಕೆರೆಗೆ ಹಾರಿದ್ದಾರೆ.ಮೃತರನ್ನು ಕುದ್ದೂಸ್ ಪಾಷಾ (37), ಫಾತಿಮಾ (28), ಮೆಹರ್ (9) ಮತ್ತು ಫಿರ್ದೌಸ್ ಬೇಗಂ (6) ಎಂದು ಗುರುತಿಸಲಾಗಿದ್ದು, ಅವರ ಮೃತದೇಹಗಳನ್ನು ಕೆರೆಯಿಂದ ಹೊರತೆಗೆಯಲಾಗಿದೆ.
ಕೆರೆಗೆ ಹಾರುವ ಮುನ್ನ ವಿಷ ಸೇವಿಸಿರುವ ಶಂಕೆ ವ್ಯಕ್ತವಾಗಿದೆ.ಕೆರೆಗೆ ಹಾರುವುದನ್ನು ಕಂಡ ಸ್ಥಳೀಯರು ಕೂಡಲೇ ಕುದ್ದೂಸ್ ಪಾಷಾ ಮತ್ತು ಮೆಹರ್ ಅವರನ್ನು ರಕ್ಷಿಸಲು ಮುಂದಾದರೂ ಅದಾಗಲೇ ಸಾವಿಗೀಡಾಗಿದ್ದರು.
ಇನ್ನಿಬ್ಬರಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದರಾದರೂ ಪತ್ತೆಯಾಗಿರಲಿಲ್ಲ. ಅವರ ಮೃತದೇಹಗಳನ್ನು ಮಂಗಳವಾರ ಕೆರೆಯಿಂದ ಹೊರತೆಗೆಯಲಾಯಿತು .ನಾಲ್ವರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರ್ಥಿಕ ಸಮಸ್ಯೆಗಳು ಕುಟುಂಬವನ್ನು ಈ ನಿರ್ಧಾರಕ್ಕೆ ದೂಡಿರಬಹುದು ಎಂದು ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಖುದ್ದೂಸ್ ಕೆಲವರಿಂದ ಸಾಲ ಪಡೆದು ಮರುಪಾವತಿಸಲು ಸಾಧ್ಯವಾಗಿರಲಿಲ್ಲ.
ಆತ್ಮಹತ್ಯೆಗೆ ಕೆಲವು ಗಂಟೆಗಳ ಮೊದಲು, ಅವರು 10,000 ರೂಪಾಯಿ ಸಾಲ ನೀಡುವಂತೆ ಸಂಬಂಧಿಕರ ಬಳಿ ಮನವಿ ಮಾಡಿದ್ದರು್ ಎಂದು ವರದಿಯಾಗಿದೆ.