ಬೆಂಗಳೂರು, ಮೇ 31 (DaijiworldNews/DB): ರಾಜ್ಯಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇದೀಗ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಖುದ್ದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕರೆ ಮಾಡಿ ತಮ್ಮಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿರುವುದು ಚುನಾವಣಾ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.
ಜೆಡಿಎಸ್ ಗೆ ಕೇವಲ ಹದಿಮೂರು ಸ್ಥಾನಗಳ ಅವಶ್ಯಕತೆ ಇದೆ. ಹೀಗಾಗಿ ಕಾಂಗ್ರೆಸ್ನ ಹೆಚ್ಚುವರಿ ಮತಗಳನ್ನು ಜೆಡಿಎಸ್ ಅಭ್ಯರ್ಥಿಗಳಿಗೆ ನೀಡಬೇಕು ಎಂಬುದು ಸೋನಿಯಾ ಜೊತೆ ದೇವೇಗೌಡರ ಮನವಿ. ಇದೇ ವೇಳೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಈ ವಿಚಾರವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಜತೆ ಮಾತುಕತೆ ನಡೆಸಿದ್ದಾರೆ.
ಈ ನಡುವೆ ಕಾಂಗ್ರೆಸ್ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ಜೆಡಿಎಸ್ ನಾಯಕರಿಗೆ ಆಶ್ಚರ್ಯ ತಂದಿದೆ. ಸೋನಿಯಾ ಜೊತೆ ಮಾತನಾಡಿದ ಬಳಿಕವೂ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ಯಾಕೆ ಎಂಬುದು ಜೆಡಿಎಸ್ ಪ್ರಶ್ನೆ. ಬಿಜೆಪಿಯನ್ನು ಗೆಲ್ಲಿಸಬೇಕೆಂದು ಕಾಂಗ್ರೆಸ್ನವರು ಪಣತೊಟ್ಟಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಟೀಕಿಸಿದ್ದಾರೆ.
ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ಮುಖಂಡ ಎಚ್.ಡಿ. ರೇವಣ್ಣ, 32 ಮತ ನಮ್ಮ ಬಳಿ ಇದೆ. ಕುಪೇಂದ್ರ ರೆಡ್ಡಿಅವರನ್ನುಈಗಾಗಲೇ ಕಣಕ್ಕಿಳಿಸಲಾಗಿದೆ. ಅವರ ಬೆಂಬಲಕ್ಕಾಗಿ ಸೋನಿಯಾ ಜೊತೆ ಈಗಾಗಲೇ ಚರ್ಚಿಸಲಾಗಿದೆ. ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಲಾಗಿದ್ದು, ಸಿದ್ದರಾಮಯ್ಯ ಭೇಟಿಗೆ ಅವಕಾಶ ಕೇಳಲಾಗಿದೆ. ಆದರೆ ದಿಢೀರ್ ಬೆಳವಣಿಗೆಯಲ್ಲಿ ನಿನ್ನೆ ಕಾಂಗ್ರೆಸ್ ಎರಡನೇ ಅಭ್ಯರ್ಥಿಯನ್ನು ಹಾಕಿರುವುದು ಯಾಕೆ ಎಂದು ಗೊತ್ತಾಗಿಲ್ಲ ಎಂದಿದ್ದಾರೆ. ಕೋಮುವಾದಿ ಪಕ್ಷವನ್ನು ದೂರ ಇಡಲು ಪ್ರಾದೇಶಿಕ ಪಕ್ಷವನ್ನು ಬೆಂಬಲಿಸುವಂತೆ ಸೋನಿಯಾ, ಖರ್ಗೆ, ಡಿಕೆಶಿ, ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.