ಪುಣೆ, ಮೇ 31 (DaijiworldNews/DB): ಇನ್ಸ್ಟಾಗ್ರಾಂ ಸ್ಟೇಟಸ್ ವಿಚಾರವಾಗಿ ಬಾಲಕರ ನಡುವೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಚೂಪಾದ ಆಯುಧಗಳಿಂದ ಬಾಲಕನೋರ್ವನ ಮೇಲೆ ಹಲ್ಲೆ ನಡೆಸಿದ ಘಟನೆ ಪುಣೆಯ ವಡ್ಗಾಂವ್ ಬುದ್ರುಕ್ನಲ್ಲಿ ನಡೆದಿದೆ. ಹಲ್ಲೆಕೋರ ಬಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
16 ವರ್ಷದ ಬಾಲಕ ಹಲ್ಲೆಗೊಳಗಾದವನು. ಭಾನುವಾರ ಸಂಜೆ ಘಟನೆ ನಡೆದಿದ್ದು, ಇನ್ಸ್ಟಾಗ್ರಾಂ ಸ್ಟೇಟಸ್ ವಿಚಾರವಾಗಿ ಮೂವರು ಬಾಲಕರ ನಡುವೆ ಅಸಮಾಧಾನ ಉಂಟಾಗಿದೆ. ಹಲ್ಲೆಗೊಳಗಾದ ಬಾಲಕ ಎಟಿಎಂನಿಂದ ಹಣ ವಿತ್ಡ್ರಾ ಮಾಡಲು ತೆರಳಿದ ವೇಳೆ ಇತರ ಬಾಲಕರು ಹರಿತವಾದ ಆಯುಧಗಳಿಂದ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಮೂವರು ಬಾಲಕರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪುಣೆ ಸಿಟಿ ಪೊಲೀಸರು ತಿಳಿಸಿದ್ದಾರೆ.
ಹಲ್ಲೆಗೊಳಗಾದಾತನ ರಕ್ಷಣೆಗೆ ಸಾರ್ವಜನಿಕರು ಆಗಮಿಸದಂತೆ ತಡೆಯಲು ಹಲ್ಲೆ ನಡೆಸಿದ ಬಾಲಕರ ಗುಂಪು ಗಾಳಿಯಲ್ಲಿ ಆಯುಧಗಳನ್ನು ಬೀಸುತ್ತಿದ್ದ ಆಘಾತಕಾರಿ ಮಾಹಿತಿಯನ್ನೂ ಪೊಲೀಸರು ನೀಡಿದ್ದಾರೆ.