ಬೆಂಗಳೂರು, ಮೇ 31 (DaijiworldNews/DB): ಉದಯಪುರ ಮಾದರಿಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ವತಿಯಿಂದ ಜೂನ್ 1ರಿಂದ 3ರವರೆಗೆ ಚಿಂತನಾ ಶಿಬಿರ ನಡೆಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ರಾಜಸ್ಥಾನದ ಉದಯ ಪುರದಲ್ಲಿ ಹಮ್ಮಿಕೊಂಡ ಮಾದರಿಯಲ್ಲಿ ರಾಜ್ಯದಲ್ಲಿ ಶಿಬಿರ ನಡೆಸಲಾಗುವುದು. ಸುಮಾರು 400 ಮಂದಿ ಕಾರ್ಯಕರ್ತ- ಮುಖಂಡರೊಂದಿಗೆ ಈ ಸಂಬಂಧ ಚರ್ಚಿಸಿ ಕಾರ್ಯಕ್ರಮ ರೂಪಿಸಲಾಗಿದೆ. ಇದಕ್ಕಾಗಿ ಐವರು ಹಿರಿಯರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚನೆ ಮಾಡಲಾಗಿದೆ ಎಂದರು.
ಸಭೆಯಲ್ಲಿ ಕೆಲವು ಪ್ರಮುಖ ವಿಷಯಗಳನ್ನು ಚರ್ಚಿಸಿ ನಿರ್ಣಯಗಳನ್ನು ಕೈಗೊಳ್ಳಲಾಗುತ್ತದೆ. ಬೆಲೆ ಏರಿಕೆ ಬಗ್ಗೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಅಧ್ಯಕ್ಷತೆಯಲ್ಲಿ ಚರ್ಚೆ ನಡೆಯಲಿದೆ. ವಿಧಾನ ಪರಿಷತ್ನ ಪ್ರತಿ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಅಧ್ಯಕ್ಷತೆಯ ಸಮಿತಿಯಲ್ಲಿ ಪಕ್ಷ ಸಂಘಟನೆ ಕುರಿತು ಮಾತುಕತೆ ನಡೆಯಲಿದೆ. ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ನೇತೃತ್ವದಲ್ಲಿ ರೈತ ಸಮಿತಿ, ರಾಜಕೀಯ ಬೆಳವಣಿಗೆಗಳು ಕುರಿತು ಚರ್ಚೆ ನಡೆಯಲಿದೆ. ಡಾ. ಜಿ. ಪರಮೇಶ್ವರ್ ನೇತೃತ್ವದ ಸಮಿತಿಯಲ್ಲಿ ಚುನಾವಣೆ ಸಂಬಂಧ ಚರ್ಚೆ, ಕೃಷ್ಣ ಭೈರೇಗೌಡ ನೇತೃತ್ವದ ಸಮಿತಿಯಲ್ಲಿ ಯುವಕರ ಬಗ್ಗೆ ಚರ್ಚೆ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
500 ಕೂ ಹೆಚ್ಚುಮಂದಿ ಶಿಬಿರದಲ್ಲಿ ಭಾಗವಹಿಸಲಿದ್ದು, ಇವರನ್ನು ಆರು ತಂಡಗಳನ್ನಾಗಿ ಮಾಡಿ ಚರ್ಚೆಗೆ ಕಳುಹಿಸಲಾಗುತ್ತದೆ. ಶಾಸಕರು, ಸಂಸದರು, ಮಾಜಿ ಸಚಿವರು, ಮಾಜಿ ಶಾಸಕರು, ಮುಂಚೂಣಿ ಘಟಕಗಳ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ವಿವರಿಸಿದರು.