ನವದೆಹಲಿ, ಮೇ 31 (DaijiworldNews/MS): ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಪ್ರಕರಣದ ಮೂಲಕ ದೇಶಾದ್ಯಂತ ಸುದ್ದಿ ಮಾಡಿದ್ದ ಐಆರ್ಎಸ್ ಅಧಿಕಾರಿ ಸಮೀರ್ ವಾಖಂಡೆ ವರ್ಗಾವಣೆಯಾಗಿದೆ.
ಮುಂಬೈನ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಮುಖ್ಯಸ್ಥರಾಗಿದ್ದ ಭಾರತೀಯ ಕಂದಾಯ ಸೇವೆ (ಐಆರ್ಎಸ್) ಅಧಿಕಾರಿ ಸಮೀರ್ ವಾಂಖೆಡೆ ಅವರನ್ನು ಸೋಮವಾರ ಚೆನ್ನೈನ ಡಿಜಿ ತೆರಿಗೆದಾರರ ಸೇವಾ ನಿರ್ದೇಶನಾಲಯಕ್ಕೆ ವರ್ಗಾವಣೆ ಮಾಡಲಾಗಿದೆ.
ಕಳೆದ ವರ್ಷ ಮುಂಬೈ-ಗೋವಾ ಐಷಾರಾಮಿ ಹಡಗಿನಲ್ಲಿ ನಡೆಯುತ್ತಿದ್ದ ಪಾರ್ಟಿ ಮೇಲೆ ಎನ್ಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ 20 ಮಂದಿಯನ್ನು ಬಂಧಿಸಲಾಗಿತ್ತು. ಶಾರೂಖ್ ಪುತ್ರ ಹಲವು ದಿನಗಳ ಕಾಲ ಜೈಲುವಾಸ ಅನುಭವಿಸುವಂತೆಯೂ ಆಗಿತ್ತು.
2008ನೇ ಬ್ಯಾಚ್ ಐಆರ್ಎಸ್ ಅಧಿಕಾರಿ ಸಮೀರ್ ವಾಖಂಡೆ 2020ರ ಸೆಪ್ಟೆಂಬರ್ನಿಂದ ಎನ್ಸಿಬಿಯಲ್ಲಿದ್ದರು.ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ಗೆ ಸಂಬಂಧಿಸಿದ ಮಾದಕವಸ್ತು ಪ್ರಕರಣದ ತನಿಖೆಗಾಗಿ ವಾಂಖೆಡೆ 2020 ರಲ್ಲಿ ಎನ್ಸಿಬಿಗೆ ತೆರಳಿದ್ದರು. ಈ ಪ್ರಕರಣದಲ್ಲಿ ಅವರ ಸ್ನೇಹಿತೆ ರಿಯಾ ಚಕ್ರವರ್ತಿ ಅವರನ್ನು ಬಂಧಿಸಲಾಗಿತ್ತು. NCB ಝೋನಲ್ ಡೈರೆಕ್ಟರ್ ಆಗಿದ್ದ ಅವಧಿಯಲ್ಲಿ, ವಾಂಖೆಡೆ ಅವರು ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡ ಪ್ರಕರಣಗಳನ್ನು ಒಳಗೊಂಡಂತೆ ಹಲವಾರು ಪ್ರಕರಣಗಳನ್ನು ದಾಖಲಿಸಿದ್ದಾರೆ.