ಬೆಂಗಳೂರು, ಮೇ 30 (DaijiworldNews/DB): ರಾಷ್ಟ್ರೀಯ ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಪತ್ರಕರ್ತರ ಸೋಗಿನಲ್ಲಿ ಬಂದು ಟಿಕಾಯತ್ ಮೇಲೆ ಆರೋಪಿಗಳು ಮಸಿ ಬಳಿದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಮೂವರ ಬಂಧನವಾಗಿದೆ. ಆರೋಪಿಗಳು ಯಾವುದೇ ಪಕ್ಷ, ಸಂಘಟನೆಗಳವರೇ ಆಗಿರಲಿ, ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇಂತಹ ಘಟನೆ ಅಕ್ಷಮ್ಯ ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಂಬಂಧ ಎಲ್ಲರೂ ಸಹಕರಿಸಬೇಕು. ಕಾನೂನುಬಾಹಿರ ಕೃತ್ಯಗಳು ಕ್ಷಮೆಗೆ ಅರ್ಹವಲ್ಲ. ಅಂತಹ ಘಟನೆಗಳು ರಾಜ್ಯದ ಹೆಸರಿಗೆ ಕಪ್ಪುಚುಕ್ಕೆಯಾಗುತ್ತದೆ ಎಂದು ಇದೇ ವೇಳೆ ಅವರು ತಿಳಿಸಿದರು.
ಪಠ್ಯ ವಿಚಾರ ಮರೆಮಾಚಲು ಟಿಕಾಯತ್ ಮುಖಕ್ಕೆ ಮಸಿಬಳಿಯಲಾಗಿದೆ ಎಂಬ ಡಿ.ಕೆ. ಶಿವಕುಮಾರ್ ಆರೋಪಕ್ಕೆ ತಿರುಗೇಟು ನೀಡಿದ ಅವರು, ಚುನಾವಣೆ ಸನಿಹ ಬರುವಾಗ ಕಾಂಗ್ರೆಸ್ ಇಂತಹ ಅಸಂಬದ್ದ ಆರೋಪಗಳನ್ನು ಮಾಡುತ್ತಿದೆ. ಆದರೆ ಜನ ಕಾಂಗ್ರೆಸ್ ಬಿಟ್ಟು ಹೋಗುತ್ತಿದ್ದು, ಆ ಪಕ್ಷ ಮುಳುಗುತ್ತಿದೆ. ಹಾಗಾಗಿ ಅವರ ಮಾತನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದರು.