ಬೆಂಗಳೂರು, ಮೇ 30 (DaijiworldNews/HR): ರೈತ ನಾಯಕ ರಾಕೇಶ್ ಟಿಕಾಯತ್ ಅವರ ಮೇಲೆ ನಡೆದಿರುವ ಹಲ್ಲೆ ಅತ್ಯಂತ ಖಂಡನೀಯ ದುಷ್ಕೃತ್ಯ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ , ನೆನಪಿರಲಿ, ಈ ಗೂಂಡಾಗಳು ಮಸಿ ಬಳಿದಿರುವುದು ರಾಜ್ಯ ಸರ್ಕಾರದ ಮುಖಕ್ಕೆ. ಈ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ ಜೈಲಿಗೆ ಅಟ್ಟದಿದ್ದರೆ ಮುಖ್ಯಮಂತ್ರಿಗಳ ಕುರ್ಚಿಯಲ್ಲಿ ಕೂರುವ ನೈತಿಕತೆ ನಿಮಗಿಲ್ಲ ಎಂದಿದ್ದಾರೆ.
ಇನ್ನು ರೈತ ನಾಯಕ ರಾಕೇಶ್ ಟಿಕಾಯತ್ ಅವರ ಮೇಲಿನ ದೈಹಿಕ ಹಲ್ಲೆ, ಭಿನ್ನಾಭಿಪ್ರಾಯವನ್ನು ಸಿದ್ದಾಂತದ ಮೂಲಕ ಎದುರಿಸಲಾಗದ ಬಿಜೆಪಿ ಮತ್ತು ಬೆಂಬಲಿಗರ ಬೌದ್ದಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಸಹನೆ-ಸಜ್ಜನಿಕೆಗೆ ಹೆಸರಾದ ನಾಡನ್ನು ಗೂಂಡಾ ರಾಜ್ಯವನ್ನಾಗಿ ಮಾಡಿದ ಕುಖ್ಯಾತಿ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.