ಲಖನೌ, ಮೇ 30 (DaijiworldNews/DB): ದೇವರುಗಳಿಂದಾಗಿ ಇಡೀ ವಿಶ್ವದಲ್ಲಿ ಭಾರತ ತನ್ನ ಗುರುತನ್ನು ಹೊಂದಿದ್ದು, ವಿಶ್ವ ಗುರುವಾಗಿ ತಲೆ ಎತ್ತಿದೆ ಎಂದು ಉತ್ತರ ಪ್ರದೇಶದ ಕಬ್ಬು ಅಭಿವೃದ್ಧಿ ಸಚಿವ ಲಕ್ಷ್ಮೀ ನಾರಾಯಣ ಚೌಧರಿ ಹೇಳಿದ್ದಾರೆ.
ದೇವರಿಗೆ ಸಂಬಂಧಿಸಿದ ಸ್ಥಳಗಳನ್ನು ಉನ್ನತೀಕರಣ ಮಾಡಲು ಯಾವುದೇ ಸರ್ಕಾರ, ಸಮುದಾಯಗಳು ಆಕ್ಷೇಪಿಸಬಾರದು. ರಾಮ ಜನ್ಮಸ್ಥಳ ಅಯೋಧ್ಯೆ, ಕೃಷ್ಣ ಜನ್ಮಸ್ಥಳ ಮಥುರಾ ವಿಶ್ವಪ್ರಸಿದ್ದವಾಗಿದೆ. ಕಾಶಿಯನ್ನು ಶಿವದೇವರು ಸೃಷ್ಟಿ ಮಾಡಿದರು. ಈ ಎಲ್ಲಾ ದೇವರುಗಳಿಂದಾಗಿ ಭಾರತ ಜಾಗತಿಕವಾಗಿ ಗುರುತು ಪಡೆದುಕೊಂಡಿದೆ. ಜಾಗತಿಕ ಶಕ್ತಿ ಕೇಂದ್ರವಾಗಿಯೂ ಈ ಕಾರಣಕ್ಕಾಗಿ ಭಾರತ ಜಗತ್ತಿನ ಗಮನ ಸೆಳೆದಿದೆ ಎಂದರು.
ಯಾವುದೇ ಸರ್ಕಾರ, ಸಮುದಾಯ ಅಥವಾ ಸಂಸ್ಥೆಗಳು ಈ ದೇವರುಗಳಿಗೆ ಸಂಬಂಧಿಸಿದ ಸ್ಥಳಗಳನ್ನು ಸುಂದರಗೊಳಿಸಲು ಬಯಸಿದರೆ ಯಾವುದೇ ಆಕ್ಷೇಪಣೆಯನ್ನು ಹೊಂದಿರಬಾರದು ಎಂದು ಹೇಳಿದರು.
ಇಡೀ ವಿಶ್ವವೇ ಭಗವದ್ಗೀತೆ ಪಠಣ ಮಾಡುತ್ತಿದೆ. ಆದರ್ಶ ಮಗ, ಪತಿ, ಸಹೋದರ, ಸ್ನೇಹಿತ ಹೇಗಿರಬೇಕೆಂಬ ಪಾಠವನ್ನು ರಾಮ ದೇವರ ನಿದರ್ಶನಗಳ ಮೂಲಕ ಇಡೀ ಜಗತ್ತು ಕಲಿಯುತ್ತಿದೆ ಎಂದವರು ತಿಳಿಸಿದರು.
ವಾರಣಾಸಿ ಜ್ಞಾನವಾಪಿ ಮಸೀದಿ ಹಾಗೂ ಮಥುರಾ ಶಾಹಿ ಈದ್ಗಾ ಪ್ರಕರಣದ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಲು ಸಚಿವರು ನಿರಾಕರಿಸಿದರು.