ಮುಂಬೈ, ಮೇ 30 (DaijiworldNews/HR): 1993ರ ಮುಂಬೈ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಬಂಧಿಸಲಾಗಿದ್ದ ನಾಲ್ವರು ಆರೋಪಿಗಳಿಗೆ ಸಿಬಿಐ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಸಾಂದರ್ಭಿಕ ಚಿತ್ರ
ಮೇ 12 ರಂದು ಗುಜರಾತ್ನ ಭಯೋತ್ಪಾದನಾ ನಿಗ್ರಹ ದಳವು (ಎಟಿಎಸ್) ಅಬು ಬಾಕರ್, ಸೈಯದ್ ಖುರೇಷಿ, ಮೊಹಮ್ಮದ್ ಶೋಯಿಬ್ ಖುರೇಷಿ ಮತ್ತು ಮೊಹಮ್ಮದ್ ಯೂಸುಫ್ ಇಸ್ಮಾಯಿಲ್ ಎಂಬವರನ್ನು ಬಂಧಿಸಿತ್ತು.
ಇನ್ನು ಸಿಬಿಐನ ವಿಶೇಷ ನ್ಯಾಯಾಧೀಶರಾದ ಆರ್.ಆರ್.ಭೋಸಲೆ ಅವರ ಮುಂದೆ ನಾಲ್ವರು ಆರೋಪಿಗಳನ್ನು ಹಾಜರುಪಡಿಸಲಾಗಿದ್ದು, ಈ ವೇಳೆ ಆರೋಪಿಗಳನ್ನು ತಮ್ಮ ವಶದಲ್ಲಿಯೇ ಇಟ್ಟುಕೊಳ್ಳಲು ಇನ್ನಷ್ಟು ಅವಕಾಶ ಕೊಡಬೇಕೆಂಬ ಸಿಬಿಐನ ಮನವಿ ತಿರಸ್ಕರಿಸಿದ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಆದೇಶಿಸಿದೆ.
1993ರ ಮಾರ್ಚ್ನಲ್ಲಿ ಮುಂಬೈನಲ್ಲಿ 12 ಕಡೆ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 257 ಮಂದಿ ಮೃತಪಟ್ಟಿದ್ದರು. 1400 ಜನರು ಗಾಯಗೊಂಡಿದ್ದರು.