ನವದೆಹಲಿ, ಮೇ 30 (DaijiworldNews/DB): ಗಾಂಧೀಜಿಯವರ ಹೋರಾಟದಿಂದಲೇ ದೇಶ ಸ್ವಾತಂತ್ರ್ಯ ಪಡೆಯಿತು ಎಂಬುದನ್ನು ಪೂರ್ಣವಾಗಿ ಒಪ್ಪಲು ಸಾಧ್ಯವಿಲ್ಲ. ದೇಶ ವಿಭಜನೆಗೆ ಮುಂದಾದ ನೆಹರೂರನ್ನು ತಡೆಯಲು ಗಾಂಧೀಜಿ ಏನೂ ಮಾಡಲಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಸಿ,ಟಿ. ರವಿ, ಗಾಂಧೀಜಿ ಜನರನ್ನು ಒಗ್ಗೂಡಿಸಿದರು. ಕ್ರಾಂತಿಕಾರಿಗಳು ಹೋರಾಟ ಮಾಡಿದರು. ಎರಡನೇ ಮಹಾಯುದ್ದದಲ್ಲಿ ಸಾಮರ್ಥ್ಯ ಕಳೆದುಕೊಂಡ ಬ್ರಿಟಿಷರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ದೇಶಗಳಿಗೆ ಬ್ರಿಟೀಷರು ಸ್ವಾತಂತ್ರ್ಯ ನೀಡಿದರು. ಗಾಂಧೀಜಿಯೇ ಇದನ್ನು ದೊರಕಿಸಿಕೊಟ್ಟಿರುವುದು ಎಂಬುದನ್ನು ಸಂಪೂರ್ಣವಾಗಿ ಒಪ್ಪಲಾಗದು ಎಂದರು.
ಎರಡನೇ ಮಹಾಯುದ್ಧದ ಪರಿಣಾಮ ಬ್ರಿಟೀಷರು ಸಾಮರ್ಥ್ಯ ಕಳೆದುಕೊಂಡರು ಹಾಗಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ದೇಶಗಳಿಗೆ ಬ್ರಿಟೀಷರು ಸ್ವಾತಂತ್ರ್ಯ ನೀಡಿದರು.
ನೆಹರೂ, ಜಿನ್ನಾ ಸೇರಿ ದೇಶವನ್ನೇ ಒಡೆದರು. ಅದರ ಪರಿಣಾಮ ಅತ್ಯಾಚಾರ, ಮತಾಂತರಗಳೂ ನಡೆದವು. ಗಾಂಧೀಜಿಯಲ್ಲಿಯೂ ದೌರ್ಬಲ್ಯಗಳಿದ್ದವು. ದೇಶಕ್ಕಾಗಿ ಹೋರಾಡಿದವರಿಗೆ ಏನೂ ಸಿಗಲಿಲ್ಲ ಎಂದು ಇದೇ ವೇಳೆ ಅವರು ತಿಳಿಸಿದರು.
ದೇಶ ವಿಭಜನೆಯಾಗುತ್ತಿರುವುದನ್ನು ಅರಿತ ಸಾವರ್ಕರ್ ಹಿಂದೂಗಳಿಗೆ ಸೇನೆ ಸೇರಲು ಕರೆ ನೀಡಿದರು. ಒಂದು ವೇಳೆ ಮುಸ್ಲಿಮರ ಸಂಖ್ಯೆಯೇ ಸೇನೆಯಲ್ಲಿ ಹೆಚ್ಚಿರುತ್ತಿದ್ದರೆ ಕಾಶ್ಮೀರ, ದೆಹಲಿ ಮಾತ್ರವಲ್ಲ, ಇಡೀ ಭಾರತವೇ ಉಳಿಯುತ್ತಿರಲಿಲ್ಲ ಎಂದರು.