ಬೆಂಗಳೂರು, ಮೇ 30 (DaijiworldNews/DB): ಪಠ್ಯ ಪುಸ್ತಕ ವಿವಾದ ಹೆಚ್ಚುತ್ತಿರುವ ನಡುವೆಯೇ ಸಾಹಿತಿ ಹಂಪ ನಾಗರಾಜಯ್ಯ ಕುವೆಂಪು ಪ್ರತಿಷ್ಠಾನಕ್ಕೆ ರಾಜೀನಾಮೆ ಸಲ್ಲಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿವರಿಗೆ ಪತ್ರ ಬರೆದಿದ್ದಾರೆ.
ರಾಜೀನಾಮೆ ಸಲ್ಲಿಸಿ ಪತ್ರ ಕಳುಹಿಸಿರುವ ಅವರು, ಸಮಿತಿ ಸಿದ್ದಪಡಿಸಿರುವ ಹೊಸ ಪುಸ್ತಕವನ್ನು ತತ್ಕ್ಷಣ ತಡೆ ಹಿಡಿಯಬೇಕು. ಹಿಂದಿನ ಪಠ್ಯವನ್ನೇ ಮುಂದುವರಿಸುವಂತೆ ಸುತ್ತೋಲೆ ಹೊರಡಿಸಬೇಕು. ಸರ್ಕಾರ ಇದಕ್ಕೆ ಸ್ಪಂದಿಸದೇ ಇರುವುದರಿಂದ ರಾಜೀನಾಮೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಕನ್ನಡಕ್ಕಾಗಿ ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಕನ್ನಡ ಕವಿ ಕುವೆಂಪು. ಆದರೆ ಇಂದು ಅವರನ್ನು ನಿಂದಿಸಿ, ರಾಷ್ಟ್ರಗೀತೆಯನ್ನು ಲೇವಡಿ ಮಾಡಿದ ವ್ಯಕ್ತಿಗೆ ಸರ್ಕಾರ ಜವಾಬ್ದಾರಿಯುತ ಸ್ಥಾನ ನೀಡಿದೆ. ಇದರಿಂದ ಕೆಟ್ಟ ಸಂದೇಶ ರವಾನೆಯಾಗುತ್ತದೆ. ವ್ಯಕ್ತಿಗಳ ತೇಜೋವಧೆಯನ್ನು ಸರ್ಕಾರ ಸಹಿಸುವುದಿಲ್ಲ ಎಂಬುದು ಸತ್ಯಕ್ಕೆ ದೂರವಾಗಿದೆ. ಕುವೆಂಪು, ನಾಡಗೀತೆಗಾದ ಅಪಮಾನ ಸಹಿಸಿ ಸುಮ್ಮನಿರುವುದು ಕಷ್ಟ ಸಾಧ್ಯ. ಹೀಗಾಗಿ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನ ಮತ್ತು ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ರಾಜೀನಾಮೆಯನ್ನು ಅಂಗೀಕರಿಸಬೇಕೆಂದು ಮನವಿ ಮಾಡುತ್ತೇನೆ ಎಂದು ಪತ್ರದಲ್ಲಿ ಹೇಳಿದ್ದಾರೆ.