ಅಹಮದಾಬಾದ್, ಮೇ 30 (DaijiworldNews/DB): ಗುಜರಾತ್ನ ಕಚ್ ಜಿಲ್ಲೆಯಲ್ಲಿ ಅಂಚೆ ಇಲಾಖೆಯು ಡ್ರೋನ್ ಮೂಲಕ ಪ್ರಾಯೋಗಿಕ ಅಂಚೆ ಪಾರ್ಸೆಲ್ ವಿತರಣೆ ನಡೆಸಿ ಯಶಸ್ವಿಯಾಗಿದೆ. 46 ಕಿಮೀ ದೂರವನ್ನು 25 ನಿಮಿಷಗಳಲ್ಲಿ ಡ್ರೋನ್ ಕ್ರಮಿಸಿದೆ.
ಕೇಂದ್ರ ಸಂವಹನ ಸಚಿವಾಲಯದ ಮಾರ್ಗದರ್ಶನದ ಮೇರೆಗೆ ಈ ಪ್ರಾಯೋಗಿಕ ಕಾರ್ಯ ನಡೆದಿದೆ. ಭುಜ್ ತಾಲೂಕಿನ ಹಬೇ ಗ್ರಾಮದಿಂದ ಕಚ್ ಜಿಲ್ಲೆಯ ಭಚೌ ತಾಲೂಕಿನ ನೇರ್ ಗ್ರಾಮಕ್ಕೆ ಅಂಚೆ ಬಟವಾಡೆ ಮಾಡಲಾಗಿದೆ . ಮುಂದಿನ ದಿನಗಳಲ್ಲಿ ಡ್ರೋನ್ ಮೂಲಕ ಅಂಚೆ ವಿತರಣೆಗೆ ಇದು ಮುನ್ನುಡಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.
ಆಧುನಿಕ ತಂತ್ರಜ್ಞಾನಗಳೊಂದಿಗೆ ಜನರನ್ನು ಬೇಗ ತಲುಪುವುದು ಇದರ ಉದ್ದೇಶ. ವಾಣಿಜ್ಯೀಕರಣವಾಗಿ ಈ ಪ್ರಾಯೋಗಿಕ ವ್ಯವಸ್ಥೆ ಯಶಸ್ವಿಯಾದರೆ ಮುಂದೆ ಅಂಚೆ ಪಾರ್ಸೆಲ್ ವಿತರಣಾ ಸೇವೆಗಳು ತಂತ್ರಜ್ಞಾನದ ಸ್ಪರ್ಶ ಪಡೆದುಕೊಳ್ಳಲಿವೆ ಎಂದು ವರದಿಗಳು ಹೇಳಿವೆ.
ದೇಶವು ಡ್ರೋನ್ ಮಹೋತ್ಸವವನ್ನು ಆಚರಿಸುತ್ತಿರುವುದರ ನಡುವೆ ಪ್ರಾಯೋಗಿಕ ಪರೀಕ್ಷೆಯೂ ಡ್ರೋನ್ ಮೂಲಕ ಯಶಸ್ವಿಯಾಗಿದೆ. 46 ಕಿಮೀ ದೂರದಲ್ಲಿರುವ ಸ್ಥಳವನ್ನು ಡ್ರೋನ್ ಕೇವಲ 25 ನಿಮಿಷಗಳಲ್ಲಿ ಕ್ರಮಿಸಿದೆ. ಇದು ವೈದ್ಯಕೀಯ ಪಾರ್ಸೆಲ್ ಆಗಿತ್ತು ಎಂದು ಕೇಂದ್ರ ಸಂವಹನ ಖಾತೆ ರಾಜ್ಯ ಸಚಿವ ದೇವುಸಿನ್ಹ್ ಚೌಹಾಣ್ ಅವರು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.