ಹುಮನಾಬಾದ್, ಮೇ 30 (DaijiworldNews/DB): ಇಲ್ಲಿನ ಘಾಟಬೋರಳ ಗ್ರಾಮದಲ್ಲಿ ಆಸ್ತಿ ವಿವಾದದ ಕಾರಣದಿಂದ ತಂದೆಯನ್ನು ಸ್ವಂತ ಮಗನೇ ಕೊಲೆ ಮಾಡಿರುವ ಘಟನೆ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ದಿಗಂಬರ ತುಕಾರಾಮ ಇರದೆ (65) ಎಂದು ಗುರುತಿಸಲಾಗಿದೆ. ತಂದೆ ಮತ್ತು ಮಗುನ ನಡುವೆ ಆಸ್ತಿ ಕುರಿತಾದ ತಕರಾರುಗಳು ನಡೆದಿದ್ದವು. ಈ ವೇಳೆ ದಿಗಂಬರ ಅವರ ಪುತ್ರ ದಿನೇಶ ಇರದೆ ತಂದೆಯ ತಲೆಗೆ ಕಟ್ಟಿಗೆಯಿಂದ ಬಲವಾಗಿ ಹೊಡೆದಿದ್ದಾನೆ ಎನ್ನಲಾಗಿದೆ.
ಭಾನುವಾರ ಸಂಜೆ ಘಟನೆ ನಡೆದಿದೆ. ತಲೆಗೆ ಬಲವಾದ ಏಟು ಬಿದ್ದ ಕಾರಣ ತೀವ್ರ ರಕ್ತಸ್ರಾವವಾಗುತ್ತಿದ್ದ ಹಿನ್ನೆಲೆಯಲ್ಲಿ ಕೂಡಲೇ ಅವರನ್ನು ಬೀದರ್ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಗ್ಗೆ ಅವರು ಮೃತಪಟ್ಟರು. ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.