ನವದೆಹಲಿ, ಮೇ 30 (DaijiworldNews/MS): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಮಕ್ಕಳಿಗಾಗಿ ಪಿಎಂ ಕೇರ್ಸ್ ಯೋಜನೆಯಡಿ ವಿವಿಧ ಸೌಲಭ್ಯಗಳನ್ನು ಬಿಡುಗಡೆ ಮಾಡಿದರು.
ಕೊವೀಡ್ ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳ ಮಾಸಿಕ 4 ಸಾವಿರ ರೂಪಾಯಿ ವಿದ್ಯಾರ್ಥಿ ವೇತನ, ಪಿಎ ಕೇರ್ಸ್ ಫಾರ್ ಚಿಲ್ಡ್ರನ್ ಮೂಲಕ ಮಕ್ಕಳಿಗೆ ಆಯುಷ್ಮಾನ್ ಹೆಲ್ತ್ ಕಾರ್ಡ್ ನೀಡಿಕೆ ಆ ಮೂಲಕ 5 ಲಕ್ಷದವರೆಗೆ ಉಚಿತ ಚಿಕಿತ್ಸಾ ಸೌಲಭ್ಯ ನೀಡುವ ಯೋಜನೆಯನ್ನು ಘೋಷಿಸಿದರು.
ನಂತರ ಮಾತನಾಡಿದ ಪ್ರಧಾನಿ, ಈ ಯೋಜನೆಯಡಿ ಮಕ್ಕಳಿಗೆ ಪ್ರತಿ ತಿಂಗಳು 4 ಸಾವಿರ ರೂಪಾಯಿ ನೀಡಲಾಗುತ್ತದೆ. ಇದು ಅವರ ದೈನಂದಿನ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ . ಪಿಎಂ ಕೇರ್ಸ್ ನಿಧಿಯು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಆಸ್ಪತ್ರೆಗಳನ್ನು ಸಿದ್ದಗೊಳಿಸಲು, ವೆಂಟಿಲೇಟರ್ಗಳನ್ನು ಖರೀದಿಸಲು ಮತ್ತು ಆಮ್ಲಜನಕ ಘಟಕಗಳನ್ನು ಸ್ಥಾಪಿಸಲು ಸಾಕಷ್ಟು ಸಹಾಯ ಮಾಡಿದೆ. ಇದರಿಂದಾಗಿ ಅನೇಕ ಜೀವಗಳನ್ನು ಉಳಿಸಲಾಗಿದೆ. ನಮ್ಮನ್ನು ಅಕಾಲಿಕವಾಗಿ ತೊರೆದವರ ಮಕ್ಕಳಿಗಾಗಿ, ನಿಮ್ಮೆಲ್ಲರ ಭವಿಷ್ಯಕ್ಕಾಗಿ ಈ ನಿಧಿಯನ್ನು ಬಳಸಲಾಗುತ್ತಿದೆ ಎಂದರು.
ಸಾಂಕ್ರಾಮಿಕ ರೋಗದ ಸಮಯದಲ್ಲಿ ತಮ್ಮ ಹೆತ್ತವರನ್ನು ಕಳೆದುಕೊಂಡ ಮಕ್ಕಳಿಗಾಗಿ ಈ ಕಾರ್ಯಕ್ರಮವಾಗಿದೆ. ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆ ಅಂತಹ ಮಕ್ಕಳಿಗೆ ಮಾಡುವ ಪ್ರಯತ್ನವಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು.
ಈ ಯೋಜನೆಯ ಬಗ್ಗೆ ವಿವರಗಳನ್ನು ಬಹಿರಂಗಪಡಿಸಿದ ಪ್ರಧಾನಿ ಮೋದಿ, ಯಾರಿಗಾದರೂ ವೃತ್ತಿಪರ ಕೋರ್ಸ್ಗಳಿಗೆ, ಉನ್ನತ ಶಿಕ್ಷಣಕ್ಕಾಗಿ ಶಿಕ್ಷಣ ಸಾಲದ ಅಗತ್ಯವಿದ್ದರೆ, ಪಿಎಂ-ಕೇರ್ಸ್ ಸಹಾಯ ಮಾಡುತ್ತದೆ ಎಂದು ಹೇಳಿದರು.