ಆಲಪ್ಪುಳ, ಮೇ 30 (DaijiworldNews/MS): ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಜಿಲ್ಲೆಯಲ್ಲಿ ಇತ್ತೀಚೆಗೆ ಕೇರಳದ ಆಲಪ್ಪುಳದಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಅಪ್ರಾಪ್ತ ಬಾಲಕನೊಬ್ಬ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಫ್ರಂಟ್ ಆಫ್ ಇಂಡಿಯಾದ(ಪಿಎಫ್ಐ) ಮುಖಂಡನನ್ನು ಬಂಧಿಸಲಾಗಿದೆ.
ಪಿಎಫ್ಐ ಸಂಘಟನೆಯ ಬಂಧಿತ ಮುಖಂಡ ಯಾಹ್ಯಾ ತಂಗಳ್ ಕಾರ್ಯಕ್ರಮದ ಸಂಘಟಕರಲ್ಲಿ ಒಬ್ಬರಾಗಿದ್ದಾರೆ. ವಿವಾದಾತ್ಮಕ ಘೋಷಣೆಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಆ ಹಿನ್ನೆಲೆಯಲ್ಲಿ ತಂಗಳ್ರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಗಣರಾಜ್ಯವನ್ನು ಉಳಿಸಿ’ ಎಂಬ ರ್ಯಾಲಿಯಲ್ಲಿ ಅಪ್ರಾಪ್ತ ಬಾಲಕನೊಬ್ಬ ತಂದೆಯ ಹೆಗಲ ಮೇಲೆ ಕುಳಿತು ಪ್ರಚೋದನಕಾರಿ ಘೋಷಣೆಗಳನ್ನು ಕೂಗಿರುವ ವಿಡಿಯೊ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿತ್ತು. ಇದಕ್ಕೆ ಸಂಬಂಧಿಸಿದಂತೆ ಬಾಲಕನ ತಂದೆಯನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ.
ಕಾರ್ಯಕ್ರಮದಲ್ಲಿ ಸಂಘಟಕರಲ್ಲಿ ಒಬ್ಬರಾದ ಯಾಹ್ಯಾ ತಂಗಳ್ ಅವರನ್ನು ಬಂಧಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತಂಗಳ್ ಅವರು ಕೇರಳ ಹೈಕೋರ್ಟ್ನ ನ್ಯಾಯಾಧೀಶರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಪ್ರಕರಣದಲ್ಲಿ ಪೊಲೀಸರು ಸ್ವಂತವಾಗಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಇದನ್ನು ಹೈಕೋರ್ಟ್ ಗಮನಕ್ಕೆ ತರಲಾಗುವುದು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ತಮ್ಮ ಮಗ ಕಾರ್ಯಕ್ರಮವೊಂದರಲ್ಲಿ ಇಂತಹ ಘೋಷಣೆಯನ್ನು ಕೂಗುತ್ತಿರುವುದು ಇದೇ ಮೊದಲಲ್ಲ. ಆತ ಇದೇ ರೀತಿಯ ಘೋಷಣೆಗಳನ್ನು ಕೂಗಿರುವ ಅನೇಕ ಉದಾಹರಣೆಗಳನ್ನು ಯೂ ಟ್ಯೂಬ್ನಲ್ಲಿ ನೋಡಬಹುದಾಗಿದೆ ಎಂದು ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ ಬಾಲಕನ ತಂದೆ ಹೇಳಿದ್ದರು.