ಕೋಲ್ಕತ್ತಾ, ಮೇ 30 (DaijiworldNews/DB): ಪಶ್ಚಿಮ ಬಂಗಾಳದಲ್ಲಿ ನಟಿಯರ ಸಾವಿನ ಸರಣಿ ಮುಂದುವರಿದಿದ್ದು, ಭಾನುವಾರ ಮತ್ತೋರ್ವ ಮಾಡೆಲ್ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಮಾಡೆಲ್ ಸರಸ್ವತಿ ದಾಸ್ (19) ಕೋಲ್ಕತ್ತಾದ ಕಸ್ಬಾ ಪ್ರದೇಶದಲ್ಲಿರುವ ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಅವರು ಡೆತ್ನೋಟ್ ಬರೆದಿಟ್ಟಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.
ರಾಜ್ಯದಲ್ಲಿ ಕಳೆದ 13 ದಿನಗಳಲ್ಲಿ ಒಟ್ಟು ನಾಲ್ವರು ನಟಿಯರು ಮತ್ತು ಮೋಡೆಲ್ಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪಲ್ಲವಿ ಡೇ, ಬಿದಿಶಾ ದೇ ಮಜುಂದಾರ್ ಮತ್ತು ಮಂಜುಷಾ ನಿಯೋಗಿ ಈ ಹಿಂದೆ ಸಾವನ್ನಪ್ಪಿದ್ದರು.
ಮಾಡೆಲ್ ಸರಸ್ವತಿದಾಸ್ ವೃತ್ತಿ ಜೀವನದಲ್ಲಿ ಸಾಕಷ್ಟು ಅವಕಾಶ ಪಡೆದುಕೊಂಡಿರಲಿಲ್ಲ. ಇದರಿಂದ ಖಿನ್ನತೆಗೊಳಗಾಗಿದ್ದು, ಇತರರೊಂದಿಗೆ ಮಾತನಾಡುವುದನ್ನೂ ಕಡಿಮೆ ಮಾಡಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.