ಅಹಮದಾಬಾದ್ ಮೇ 30 (DaijiworldNews/MS): ಇತ್ತೀಚೆಗೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದ ಹಾರ್ದಿಕ್ ಪಟೇಲ್ ಸೋಮವಾರದಂದು, ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹವನ್ನು ಸ್ಪಷ್ಟವಾಗಿ ನಿರಾಕರಿಸಿದ್ದು, ಜನಪ್ರಿಯ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಯ ಕುರಿತು ಆಮ್ ಆದ್ಮಿ ಪಕ್ಷ (ಎಎಪಿ) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
"ನಾನು ನಾಳೆ ಬಿಜೆಪಿಗೆ ಸೇರುವುದಿಲ್ಲ..ಅಂತಹದ್ದೇನಾದರೂ ನಡೆದರೆ ನಿಮಗೆ ತಿಳಿಸುತ್ತೇನೆ" ಎಂದು ಹಾರ್ದಿಕ್ ಪಟೇಲ್ ಅವರು ತಿಳಿಸಿದ್ದಾರೆ.
ಪಾಟೀದಾರ್ ಮೀಸಲಾತಿ ಪರ ಹೋರಾಟವನ್ನು ಮುನ್ನಡೆಸುವ ಮೂಲಕ ನಾಯಕರಾಗಿ ಗುರುತಿಸಿಕೊಂಡಿದ್ದ ಹಾರ್ದಿಕ್ ಪಟೇಲ್, ಪಕ್ಷದ ನಾಯಕತ್ವವು ಗುಜರಾತ್ ಮತ್ತು ಗುಜರಾತಿಗಳ ಮೇಲೆ ದ್ವೇಷ ಇರುವಂತೆ ವರ್ತಿಸುತ್ತದೆ ಎಂದು ಕಾಂಗ್ರೆಸ್ ತೊರೆದಿದ್ದರು.
ಇನ್ನು ಪಂಜಾಬಿ ಗಾಯಕನ ಹತ್ಯೆಗೆ ಸಂಬಂಧಿಸಿದಂತೆ ಭಗವಂತ್ ಮಾನ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪಟೇಲ್, " ಕೆಲವು ದಿನಗಳ ಹಿಂದೆ ಅಂತರರಾಷ್ಟ್ರೀಯ ಕಬಡ್ಡಿ ಆಟಗಾರನ ಬರ್ಬರ ಹತ್ಯೆ ಮತ್ತು ಪ್ರಸಿದ್ಧ ಗಾಯಕ ಸಿಧು ಮೂಸವಾಲೆ ಅವರ ಹತ್ಯೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಪಂಜಾಬ್ ಸಿಎಂ ಮತ್ತು ದೆಹಲಿಯಿಂದ ಆಮ್ ಆದ್ಮಿ ಪಕ್ಷದ ಸರ್ಕಾರವನ್ನು ನಡೆಸುತ್ತಿರುವ ಜನರು ತಾವು ಪಂಜಾಬ್ಗೆ ನೋವು ನೀಡಲು ಕಾಂಗ್ರೆಸ್ನಂತಹ ಮತ್ತೊಂದು ಪಕ್ಷವಾಗಬೇಕೇ ಅಥವಾ ಜನರಿಗೆ ನಿಜವಾಗಿಯೂ ಏನಾದರೂ ಮಾಡಬೇಕೇ ಎಂದು ಯೋಚಿಸಬೇಕು. ಸಿಧು ಮೂಸೆವಾಲಾ ಅವರಿಗೆ ನನ್ನ ಶ್ರದ್ಧಾಂಜಲಿ" ಎಂದು ಹಾರ್ದಿಕ್ ಪಟೇಲ್ ಮತ್ತೊಂದು ಟ್ವೀಟ್ ಮಾಡಿದ್ದಾರೆ.