ಮಾನ್ಸಾ, ಮೇ 30 (DaijiworldNews/DB): ಭಾನುವಾರ ಸಂಜೆ ಹತ್ಯೆಯಾಗಿರುವ ಪಂಜಾಬ್ನ ಪ್ರಸಿದ್ದ ಗಾಯಕ ಸಿಧು ಮುಸೇವಾಲ ಅವರನ್ನು ಕೊಲೆ ಮಾಡಿರುವ ಹಂತಕರು ಕೆನಡಾದಲ್ಲಿ ನೆಲೆಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಈ ನಡುವೆ ಕೆನಡಾ ಮೂಲದ ಹಂತಕ ಗೋಲ್ಡಿ ಬ್ರಾರ್ ಹತ್ಯೆಯ ಹೊಣೆ ಹೊತ್ತುಕೊಂಡಿದ್ದಾನೆ ಎನ್ನಲಾಗಿದೆ.
ಭಾನುವಾರ ಸಂಜೆ ಪಂಜಾಬ್ನ ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದ ಬಳಿ ಸಿಧು ಮುಸೇವಾಲಾ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು. ಹತ್ಯೆಘಟನೆ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಎರಡು ಕಾರುಗಳು ಸಿಧು ಅವರ ಕಪ್ಪು ಬಣ್ಣದ ಎಸ್ಯುವಿ ಕಾರನ್ನು ಹಿಂಬಾಲಿಸುತ್ತಿರುವುದು ಕಂಡು ಬಂದಿದೆ. ಬಳಿಕ ಬಿಳಿ ಬಣ್ಣದ ಬೊಲೆರೋವೊಂದು ಹಿಂದಿನಿಂದ ವೇಗವಾಗಿ ಹೋಗುತ್ತಿರುವುದೂ ಸಿಸಿಟಿವಿಯಲ್ಲಿ ದಾಖಲಾಗಿದೆ. ಸದ್ಯ ಎರಡೂ ವಾಹನಗಳಿಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ.
ಸಿಧು ಅವರು ಗಂಭೀರ ಗಾಯಗೊಂಡ ಕಾರಣ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಈ ವೇಳೆಗಾಗಲೇ ಅವರು ಮೃತಪಟ್ಟಿದ್ದರು ಎಂದು ಪಂಜಾಬ್ ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ. ಸಿಧು ಕಾಂಗ್ರೆಸ್ನಿಂದ ರಾಜ್ಯ ಚುನಾವಣೆಗೆ ಸ್ಪರ್ಧಿಸಿದ್ದರು. ಶನಿವಾರದವರೆಗೂ ನಾಲ್ವರು ಕಮಾಂಡರ್ಗಳು ಅವರಿಗೆ ಭದ್ರತೆ ನೀಡುತ್ತಿದ್ದರು. ಆದರೆ ರವಿವಾರ ಆಪ್ ಸರ್ಕಾರ ಈ ಪೈಕಿ ಇಬ್ಬರನ್ನು ತೆಗೆದು ಹಾಕಿತ್ತು. ಇನ್ನಿಬ್ಬರು ಕಮಾಂಡೋಗಳನ್ನು ತಮ್ಮ ಜೊತೆಗೆ ಹೊರ ಬಾರದಂತೆ ಸಿಧು ತಿಳಿಸಿದ್ದರು. ಅಲ್ಲದೆ ಬುಲೆಟ್ ಪ್ರೂಫ್ ವಾಹನವನ್ನೂ ಅವರು ಕೊಂಡೊಯ್ದಿರಲಿಲ್ಲ ಎಂದು ಪೊಲೀಸ್ ಮುಖ್ಯಸ್ಥ ವಿಕೆ ಭಾವರಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕೆನಡಾ ಮೂಲದ ಹಂತಕ ಗೋಲ್ಡಿ ಬ್ರಾರ್ ಎಂಬಾತ ಹತ್ಯೆಯ ಹೊಣೆ ಹೊತ್ತುಕೊಂಡಿರುವ ಬಗ್ಗೆ ವರದಿಯಾಗಿದೆ. ಅಲ್ಲದೆ, ಪೊಲೀಸರು ಕೂಡಾ ಹಂತಕರು ಕೆನಡಾದಲ್ಲಿ ನೆಲೆಸಿದ್ದಾರೆ ಎಂದಿರುವುದು ಈ ವರದಿಗಳಿಗೆ ಇನ್ನಷ್ಟು ಪುಷ್ಠಿ ನೀಡಿದೆ. ಸದ್ಯ ಹಂತಕರ ಪತ್ತೆಗಾಗಿ ಪಂಜಾಬ್ ಪೊಲೀಸರು ಎಸ್ಐಟಿ ರಚನೆ ಮಾಡಿದ್ದಾರೆ. ತನಿಖೆ ಬಳಿಕವಷ್ಟೇ ನಿಜವಾದ ಹಂತಕರು ಯಾರೆಂಬುದು ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.