ಬೆಂಗಳೂರು, ಮೇ 29 (DaijiworldNews/SM): ಪಠ್ಯ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ನನ್ನ ಮೇಲೆ ವೈಯಕ್ತಿಕ ಆರೋಪ ಮಾಡಲಾಗುತ್ತಿದೆ. ಆದರೆ, ನಾನು ಏನು ಎಂದು ಗೊತ್ತಿದೆ. ಆರೋಪಗಳಿಗೆ ಕೀಳುಮಟ್ಟಕ್ಕಿಳಿದು ಪ್ರತಿಕ್ರಿಯೆ ನೀಡುವ ಜಾಯಮಾನ ನನ್ನದಲ್ಲ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಈ ವಿವಾದ ಬಗೆಹರಿಸಬೇಕಾಗಿದೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, "ಪಠ್ಯಪುಸ್ತಕ ಮರು ಪರಿಷ್ಕರಣೆ ಸಂಬಂಧ ಈಗ ವಿವಾದವಾಗುತ್ತಿದೆ. ನನ್ನ ಅಭಿಪ್ರಾಯವೆಂದರೆ, ಶೈಕ್ಷಣಿಕ ಕ್ಷೇತ್ರದ ಘನತೆ ಉಳಿಯಬೇಕು. ಈಗಿನ ಕಲುಷಿತ ವಾತಾವರಣದಲ್ಲಿ ನಾನು ಯಾವುದೇ ಆರೋಪಕ್ಕೆ ಉತ್ತರ ನೀಡಲು ಮುಂದಾಗುವುದಿಲ್ಲ. ನನಗೆ ಕನ್ನಡ ಸಂವೇದನೆಯು ಕನ್ನಡ ಮೌಲ್ಯ ಕಲಿಸಿಕೊಟ್ಟಿದೆ ಎಂದರು.
ಶೈಕ್ಷಣಿಕ ವಿಚಾರವಾಗಿರುವ ಕಾರಣದಿಂದಾಗಿ ಮುಖ್ಯಮಂತ್ರಿಗಳು ಈ ವಿವಾದವನ್ನು ಹೆಚ್ಚಾಗಿಸುವುದಕ್ಕೆ ಅವಕಾಶ ನೀಡಬಾರದು. ಶಿಕ್ಷಣ ಘನತೆ ಗೌರವ ಕಾಪಾಡಬೇಕು. ವಿದ್ಯಾರ್ಥಿಗಳಲ್ಲೂ ಕೂಡ ಧ್ವೇಷದ ವಿಷ ಬೀಜ ಬಿತ್ತದೆ ಸನ್ನಡತೆಯೊಂದಿಗೆ ಮುನ್ನಡೆಯುವ ಶಿಕ್ಷಣ ನೀಡಬೇಕೆಂದು ಅವರು ಒತ್ತಾಯಿಸಿದರು.