ಮಂಡ್ಯ, ಮೇ 29 (DaijiworldNews/SM): ದೇಶದ ಉದ್ದಗಲಕ್ಕೂ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಅಭಿವೃದ್ಧಿಯಲ್ಲಿ ಮುಂಚೂಣಿ ಪಾತ್ರ ವಹಿಸಬೇಕಾದ ನಾಲ್ಕು ಆಧಾರ ಸ್ಥಂಭಗಳೂ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ವಿಲವಾಗಿವೆ ಎಂದು ನಿವೃತ್ತ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ಆತಂಕ ವ್ಯಕ್ತಪಡಿಸಿದ್ದಾರೆ.
ಖಾಸಗಿ ಕಾಲೇಜೊಂದರ ಸಮಾರಂಭವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶ ಅಭಿವೃದ್ಧಿಯಾಗಬೇಕು ಎಂಬ ಉದ್ದೇಶದಿಂದ ಸಂವಿಧಾನವನ್ನು ಜಾರಿಗೊಳಿಸಲಾಯಿತು. ಅದರಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಎಂಬ ಸಂಸ್ಥೆಗಳನ್ನು ಅಸ್ತಿತ್ವಕ್ಕೆ ತರಲಾಯಿತು. ಇದರೊಂದಿಗೆ ನಾಲ್ಕನೇ ಸ್ಥಂಭವಾಗಿ ಮಾಧ್ಯಮ ಸಹ ಕಾರ್ಯ ನಿರ್ವಹಿಸುತ್ತಿದೆ. ಆದರೆ, ಇಂದು ನಾಲ್ಕು ಅಂಗಗಳು ಕೂಡ ಭ್ರಷ್ಟಾಚಾರದಿಂದ ಕೂಡಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾವಿರಾರು ವರ್ಷಗಳ ಸಂಸ್ಕೃತಿ ಇರುವ ದೇಶದಲ್ಲಿ ಏಕೆ ಈ ರೀತಿ ಆಗುತ್ತಿದೆ ಎಂಬ ಚಿಂತೆ ಕಾಡುತ್ತಿದೆ. ಇದು ಕೆಲವು ವ್ಯಕ್ತಿಗಳ ತಪ್ಪಲ್ಲ, ಸಮಾಜದ ತಪ್ಪು ಎಂದ ಅವರು, ಈ ದೇಶದ ಬೆನ್ನೆಲುಬು ಎಂದಾಗಿರುವ ಯುವ ಸಮೂಹ ಈ ದೇಶವನ್ನು ಸರಿದಾರಿಗೆ ತರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.