ಮಹಾರಾಷ್ಟ್ರ, ಮೇ 29 (DaijiworldNews/HR): ವಿವಿಧ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಮಹಾರಾಷ್ಟ್ರದ ಸಂಸದೆ ನವನೀತ್ ರಾಣಾ, ಅವರ ಪತಿ, ಶಾಸಕ ರವಿ ರಾಣಾ ಹಾಗೂ15 ಬೆಂಬಲಿಗರ ವಿರುದ್ಧ ಪೊಲೀಸರು ಮತ್ತೆ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ರಾಣಾ ದಂಪತಿ ಈ ಹಿಂದೆ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಮನೆಯ ಮುಂದೆ ಗಲಭೆ ಮಾಡಿದ್ದ ಕಾರಣಕ್ಕೆ ಬಂಧನಕ್ಕೊಳಗಾಗಿದ್ದರು.
ಇನ್ನು ಜಾಮೀನು ಪಡೆದ 36 ದಿನಗಳ ನಂತರ ತಮ್ಮ ಊರಿಗೆ ಮರಳಿದಾಗ, ಅವರ ಬೆಂಬಲಿಗರು ಮೆರವಣಿಗೆ ಮೂಲಕ ರಾಣಾ ದಂಪತಿಗೆ ಭವ್ಯ ಸ್ವಾಗತ ಕೋರಿದ್ದು, ಮೆರವಣಿಗೆ ವೇಳೆ ಹಲವು ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಅಷ್ಟೆ ಅಲ್ಲದೆ ರಾತ್ರಿ 10 ಗಂಟೆಯ ನಂತರವೂ ಧ್ವನಿ ವರ್ಧಕಗಳನ್ನು ಬಳಸಿದ್ದರಿಂದ ಐಪಿಸಿ, ಮಹಾರಾಷ್ಟ್ರ ಪೊಲೀಸ್ ಕಾಯ್ದೆ ಮತ್ತು ಪರಿಸರ ಸಂರಕ್ಷಣಾ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ರಾಜಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.