ಬೆಂಗಳೂರು, ಮೇ 29 (DaijiworldNews/DB): ರಾಜ್ಯದ ಪ್ರೌಢಶಾಲೆ ಮತ್ತು ಕಾಲೇಜುಗಳಲ್ಲಿ ಮುಂದಿನ ವರ್ಷದಿಂದ ಯೋಗಾಭ್ಯಾಸವನ್ನು ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಗಾಭ್ಯಾಸವನ್ನು ಶಾಲಾ-ಕಾಲೇಜುಗಳಲ್ಲಿ ಆರಂಭಿಸುವ ಸಂಬಂಧ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗುವುದು. ಯೋಗ ಪರಿಣಿತರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬದುಕಿನಲ್ಲಿ ಒತ್ತಡ ಜಾಸ್ತಿಯಾಗುತ್ತಿದೆ. ಕೊರೊನಾ ನಂತರ ಇದರ ಪರಿಣಾಮ ಹೆಚ್ಚಾಗಿದೆ. ಬಾಲ್ಯವನ್ನು ಅವರು ಸಂತೋಷದಿಂದ ಕಳೆಯುವಂತಾಗಬೇಕು. ಆರೋಗ್ಯಕ್ಕೂ ಯೋಗ ಅನುಕೂಲವಾಗಿರುವುದರಿಂದ ಯೋಗ ಕಲಿಕೆಯನ್ನು ಮುಂದಿನ ವರ್ಷದಿಂದ ಆರಂಭ ಮಾಡಲಾಗುವುದು ಎಂದು ಅವರು ತಿಳಿಸಿದರು.
ಯೋಗ ದಿನಾಚರಣೆಯಂದು ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಯವರು ಆಗಮಿಸುತ್ತಿದ್ದಾರೆ. ಹಾಗಾಗಿ ಸಂಘ ಸಂಸ್ಥೆಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು. ಅಲ್ಲದೆ, ಯೋಗಕ್ಕೆ ರಾಜ್ಯದ ಕೊಡುಗೆ ಮತ್ತು ಬೆಳವಣಿಗೆ ಕುರಿತು ’ಆರೋಗ್ಯ’ ಥೀಮ್ನಡಿಯಲ್ಲಿ ಪ್ರಧಾನಿ ಸಮ್ಮುಖದಲ್ಲಿ ವಿಚಾರ ಅನಾವರಣಗೊಳಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ವಿವರಿಸಿದರು.