ಹುಬ್ಬಳ್ಳಿ, ಮೇ 29 (DaijiworldNews/DB): ಇರುವೆ ಗೂಡಿನಲ್ಲಿ ಹಾವಿನಂತೆ ಸಿದ್ದರಾಮಯ್ಯ ಹೊಕ್ಕಿದ್ದಾರೆ. ಅವರು ನಕಲಿ ಕಾಂಗ್ರೆಸ್ನ ನಕಲಿ ನಾಯಕ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೆಸ್ಸೆಸ್ ಮತ್ತು ಬಿಜೆಪಿಯನ್ನು ಟೀಕಿಸಿದಷ್ಟೂ ಇಟಲಿ ನಾಯಕರಿಗೆ ಹತ್ತಿರವಾಗುತ್ತೇನೆಂಬ ಭ್ರಮೆಯಲ್ಲಿ ಅವರಿದ್ದಾರೆ. ನಿಜವಾದ ಕಾಂಗ್ರೆಸ್ ಎಂದೋ ಹೋಗಿದೆ. ಸಿದ್ದರಾಮಯ್ಯ ಕೂಡಾ ನಿಜವಾದ ಕಾಂಗ್ರೆಸ್ನ ನಾಯಕರಲ್ಲ. ಅವರು ನಕಲಿ ಕಾಂಗ್ರೆಸ್ನ ನಕಲಿ ನಾಯಕ ಎಂದರು.
ಆರೆಸ್ಸೆಸ್ ವಿರುದ್ದ ಯಾರೇ ಟೀಕೆ ಮಾಡಿದರೂ ಅದಕ್ಕೆ ಉತ್ತರ ಕೊಡುವ ಗೋಜಿಗೆ ಆರೆಸ್ಸೆಸ್ ಹೋಗುವುದಿಲ್ಲ. ನಾವು ಆರೆಸ್ಸೆಸ್ ಕಾರ್ಯಕರ್ತರಾಗಿರುವುದರಿಂದ ಉತ್ತರ ನೀಡುತ್ತಿದ್ದೇವೆ. ತುಷ್ಟೀಕರಣ ರಾಜಕಾರಣದ ಮೂಲಕ ಇಟಲ ಮೂಲದ ನಾಯಕರನ್ನು ಒಲಿಸಿ ಮತ್ತೊಮ್ಮೆ ಸಿಎಂ ಆಗುವ ಭ್ರಮೆ ಅವರದು. ಹೊಟ್ಟೆಪಾಡಿಗಾಗಿ ಅವರು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ಜೋಶಿ ಲೇವಡಿ ಮಾಡಿದರು.
ಚುನಾವಣೆ ಸಮೀಪಿಸುತ್ತಿರುವುದರಿಂದ ಮುಸ್ಲಿಮರ ಮತ ಪಡೆದು ಗೆಲ್ಲಬೇಕೆಂಬುದು ಅವರ ಉದ್ದೇಶ. ಆದರೆ ಒಮ್ಮೆ ಸಿಎಂ ಆಗಿದ್ದ ಅವರನ್ನು ಜನ ಸೋಲಿಸಿದ್ದಾರೆ. ಹಾಗಾಗಿ ಗಂಜಿಕೇಂದ್ರವನ್ನು ಹುಡುಕಿಕೊಂಡು ಹೊರಟಿದ್ದಾರೆ ಎಂದರು.
ಹಿಂದೂಗಳಗಾಬೇಕಾದರೆ ಬಿಜೆಪಿಯವರಾಗಬೇಕಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಂತಹ ಮಾತುಗಳನ್ನು ಯಾರೂ ಆಡಿಲ್ಲ. ಆದರೆ ಬಿಜೆಪಿ ಮತ್ತು ಪರಿವಾರ ಸಂಘಟನೆಗಳ ಮೇಲಿನ ಆತಂಕದಿಂದ ಸಿದ್ದರಾಮಯ್ಯ, ರಾಹುಲ್ ಗಾಂಧಿ ಸೇರಿದಂತೆ ಎಲ್ಲರಿಗೂ ತಾನು ಹಿಂದೂ ಎಂದು ಹೇಳಿಕೊಳ್ಳುವ ಸ್ಥಿತಿ ಬಂದಿದೆ.
ಹಿಂದೆಲ್ಲಾ ಹಿಂದೂ ಧರ್ಮದ ಬಗ್ಗೆ ಅಸಡ್ಡೆ ತೋರುತ್ತಿದ್ದರು. ರಾಮ ಮಂದಿರ ಅಭಿಯಾನದ ವೇಳೆ ಅವರು ಆಡಿದ ಮಾತುಗಳನ್ನು ಜನರು ಮರೆತಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ನ ತುಷ್ಠೀಕರಣ ನೀತಿ ನೆಹರು ಕಾಲದಿಂದಲೂ ಇದೆ. ಪಿಎಫ್ಐ, ಎಸ್ ಡಿಪಿಐ ವಿಷಯದಲ್ಲೂ ಅವರು ಅದನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಅದೇ ಕಾರಣದಿಂದ ಪರಿಸ್ಥಿತಿ ದೇಶದಲ್ಲಿ ಬಿಗಡಾಯಿಸಿದೆ. ಅವರ ಪಕ್ಷದಲ್ಲೇ ಸಿದ್ದರಾಮಯ್ಯ ವಿರುದ್ದ ಹಲವರು ಇದ್ದಾರೆ ಎಂದು ಪ್ರಹ್ಲಾದ್ ಜೋಶಿ ಸಿದ್ದರಾಮಯ್ಯ ಅವರ ಕಾಲೆಳೆದರು.