ಲಖನೌ, ಮೇ 29 (DaijiworldNews/DB): ರಾಜ್ಯದ ಯಾವುದೇ ಫ್ಯಾಕ್ಟರಿಗಳಲ್ಲಿ ರಾತ್ರಿ ಪಾಳಿಗಳಲ್ಲಿ ಮಹಿಳಾ ಕೆಲಸಗಾರರನ್ನು ದುಡಿಸಿಕೊಳ್ಳುವಂತಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರ ಶನಿವಾರ ಆದೇಶಿಸಿದೆ.
ಸಂಜೆ 7ರ ನಂತರ ಮತ್ತು ಬೆಳಿಗ್ಗೆ 6 ಗಂಟೆಗಿಂತ ಮುನ್ನ ಕಾರ್ಖಾನೆಗಳಲ್ಲಿ ಮಹಿಳಾ ಕೆಲಸಗಾರರು ಕಾರ್ಯ ನಿರ್ವಹಿಸುವಂತಿಲ್ಲ. ಲಿಖಿತ ಒಪ್ಪಿಗೆ ಇದ್ದಲ್ಲಿ ಮಾತ್ರ ರಾತ್ರಿ ಪಾಳಿಯಲ್ಲಿ ದುಡಿಸಿಕೊಳ್ಳಬಹುದು. ಅಲ್ಲದೆ, ಅವರಿಗೆ ಉಚಿತ ಸಾರಿಗೆ, ಆಹಾರ ಮತ್ತು ಸುರಕ್ಷತಾ ಕ್ರಮಗಳನ್ನು ಒದಗಿಸಿಕೊಡಬೇಕು. ಆದರೆ ಒಂದು ವೇಳೆ ನಿರಾಕರಿಸಿದರೆ ಅವರನ್ನು ಕೆಲಸದಿಂದ ತೆಗೆಯುವಂತಿಲ್ಲ ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ.
ಕಾರ್ಮಿಕ ಇಲಾಖೆಯ ಮುಖಾಂತರ ಈ ಸುತ್ತೋಲೆ ಹೊರಡಿಸಲಾಗಿದೆ. ರಾಜ್ಯದ ಎಲ್ಲ ಮಿಲ್ಗಳು ಮತ್ತು ಕಾರ್ಖಾನೆಗಳಲ್ಲಿನ ಮಹಿಳಾ ಉದ್ಯೋಗಿಗಳಿಗೆ ಈ ವಿನಾಯಿತಿ ನೀಡಲಾಗಿದೆ. ಕಚೇರಿ ಸ್ಥಳದಲ್ಲಿ ಲೈಂಗಿಕ ಕಿರುಕುಳದಂತಹ ಘಟನೆ ತಡೆಯುವುದು ಮತ್ತು ಸುರಕ್ಷಿತ ವಾತಾವರಣದಲ್ಲಿ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸುವ ಹೊಣೆ ಉದ್ಯೋಗದಾತರದ್ದು ಎಂದು ಸರ್ಕಾರ ತಿಳಿಸಿದೆ. ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆ, ನಿರ್ಬಂಧ ಮತ್ತು ಪರಿಹಾರ) ಕಾಯ್ದೆ, 2013ರ ನಿಯಮಗಳ ಅಡಿ ಅಥವಾ ಇತರೆ ಸಂಬಂಧಿತ ನಿಯಮಗಳ ಅಡಿ ಕಾರ್ಖಾನೆಯಲ್ಲಿ ಉದ್ಯೋಗದಾತರು ತ್ವರಿತ ದೂರು ವ್ಯವಸ್ಥೆಯನ್ನು ಅಳವಡಿಸುವುದು ಕಡ್ಡಾಯ ಎಂದೂ ಆದೇಶದಲ್ಲಿ ಸೂಚಿಸಲಾಗಿದೆ.