ಮುಂಬೈ, ಮೇ 29 (DaijiworldNews/DB): ಐಷಾರಾಮಿ ಜೀವನಕ್ಕಾಗಿ ಕಳ್ಳತನದ ದಾರಿ ಹಿಡಿದಿದ್ದ ಯೂಟ್ಯೂಬರ್ ಒಬ್ಬನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಅಭಿಮನ್ಯು ಗುಪ್ತ ಎಂದು ಗುರುತಿಸಲಾಗಿದೆ. ಈತ ಸೋಶಿಯಲ್ ಮೀಡಿಯಾ ಇನ್ಫ್ಲೂಯೆನ್ಸರ್ ಆಗಿದ್ದು, ಹಲವಾರು ಮಂದಿ ಫಾಲೋವರ್ಸ್ಗಳನ್ನು ಹೊಂದಿದ್ದ.14 ಮೊಬೈಲ್ ಫೋನ್, ಹರಿತ ಆಯುಧಗಳು, ನಕಲಿ ಆಭರಣಗಳು ಹಾಗೂ ನಕಲಿ ವಿದೇಶಿ ಕರೆನ್ಸಿ ಸೇರಿದಂತೆ ವಿವಿಧ ವಸ್ತುಗಳನ್ನು ಬಂಧಿತನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಐಶಾರಾಮಿ ಜೀವನ ನಡೆಸುವ ಉದ್ದೇಶದಿಂದ ಈತ ಸರಣಿ ಕಳ್ಳತನಕ್ಕೆ ಇಳಿದಿದ್ದ. ಮುಂಬೈ, ನವಿ ಮುಂಬೈ ಹಾಗೂ ಥಾಣೆಯ ವಿವಿಧೆಡೆ ಮನೆಗಳ ಬಾಗಿಲು ಮುರಿದು ಕಳ್ಳತನ ಮಾಡುತ್ತಿದ್ದ. ಗುರುತು ಪತ್ತೆಯಾದಂತೆ ಕ್ಯಾಪ್ ಮತ್ತು ಮಾಸ್ಕ್ ಧರಿಸುತ್ತಿದ್ದ ಎನ್ನಲಾಗಿದೆ. ಮುಂಬೈ ಉಪನಗರ ಕುರ್ಲಾದಲ್ಲಿ ಕಳೆದ ವಾರ ಮನೆಯ ಬೀಗ ಮುರಿದು ಚಿನ್ನ, ಬೆಳ್ಳಿ ಆಭರಣ ಕಳ್ಳತನ ಮಾಡಿದ ಸಂಬಂಧ ಮನೆಯವರು ದೂರು ನೀಡಿದ್ದು, ಈ ವೇಳೆ ಯೂಟ್ಯೂಬರ್ ಕೈ ಚಳಕ ಬೆಳಕಿಗೆ ಬಂದಿದೆ. ಆದರೆ, ಆತ ಮಾಸ್ಕ್, ಕ್ಯಾಪ್ ಧರಿಸಿದ್ದರಿಂದ ಸುಮಾರು150 ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರೂ ಗುರುತು ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಆದರೆ ಒಂದು ಕಡೆ ಆತ ತನ್ನ ಮಾಸ್ಕ್ ಮತ್ತು ಕ್ಯಾಪ್ ತೆಗೆಯುವುದು ಸಿಸಿಟಿವಿಯಲ್ಲಿ ದಾಖಲಾಗಿತ್ತು. ಈ ವೇಳೆ ಪೊಲೀಸರು ಆತನ ಗುರುತನ್ನು ಪತ್ತೆ ಮಾಡಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಚಾರಣೆ ವೇಳೆ ಕಳ್ಳತನದ ಬಗ್ಗೆ ಆರೋಪಿ ತಪ್ಪೊಪ್ಪಿಕೊಂಡಿದ್ದು, ಮುಂಬೈ ವಲಯದಲ್ಲಿ ಸುಮಾರು 15 ಮನೆಗಳಲ್ಲಿ ಕಳ್ಳತನ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ಮನೆಯ ಹೊರಗೆ ಇರಿಸಲಾದ ಶೂಗಳು ಮತ್ತು ಚಪ್ಪಲಿಗಳನ್ನು ಸಹ ಈತ ಕದಿಯುತ್ತಿದ್ದ. ನಾಲ್ಕು ಗೋಣಿ ಚೀಲಗಳಲ್ಲಿ ಅವುಗಳನ್ನು ತುಂಬಿಸಿಟ್ಟಿದ್ದು, ಎಲ್ಲವನ್ನೂ ವಶಪಡಿಸಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ. ಪ್ರಖ್ಯಾತ ವ್ಯಕ್ತಿಗಳೊಂದಿಗೆ ವೀಡಿಯೋ ಮಾಡಿ ಇನ್ಸ್ಟಾಗ್ರಾಂನಲ್ಲಿ ಹಾಕುತ್ತಿದ್ದ. ಅಲ್ಲದೇ ಕ್ಯಾಸಿನೋಗಳಲ್ಲಿ ಹಣ ಖರ್ಚು ಮಾಡುತ್ತಿದ್ದ. ದುಬಾರಿ ಬಟ್ಟೆಗಳನ್ನು ಖರೀದಿ ಮಾಡುತ್ತಿದ್ದ. ಇದಕ್ಕೆಲ್ಲ ಹಣ ಹೊಂದಿಸುವ ಸಲುವಾಗಿ ಕಳ್ಳತನದ ದಾರಿ ಹಿಡಿದಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) 380 (ಕಳ್ಳತನದ ಮನೆ) ಸೇರಿದಂತೆ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.