ಭಿವಂಡಿ (ಮಹಾರಾಷ್ಟ್ರ), ಮೇ 29 (DaijiworldNews/DB): ಭಾರತ ದ್ರಾವಿಡರು ಮತ್ತು ಆದಿವಾಸಿಗಳದ್ದೇ ಹೊರತು ನನ್ನದು, ಠಾಕ್ರೆ, ಮೋದಿ, ಅಮಿತ್ ಶಾರದ್ದುಅಲ್ಲ. ಮೊಘಲರ ನಂತರವೇ ಬಿಜೆಪಿ, ಆರೆಸ್ಸೆಸ್ ದೇಶದಲ್ಲಿ ಜನ್ಮ ತಳೆದಿರುವುದು ಎಂದು ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಮಹಾರಾಷ್ಟ್ರದ ಭಿವಂಡಿಯಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಆಫ್ರಿಕಾ, ಇರಾನ್, ಮಧ್ಯ ಏಷ್ಯಾ, ಪೂರ್ವ ಏಷ್ಯಾ ಕಡೆಗಳಿಂದ ಜನರು ವಲಸೆ ಬಂದ ನಂತರ ಭಾರತ ರಚನೆಯಾಗಿದೆ. ಹೀಗಾಗಿ ಮೊಘಲರ ನಂತರ ಬಿಜೆಪಿ, ಆರೆಸ್ಸೆಸ್ ಹುಟ್ಟಿಕೊಂಡಿರುವುದು ಎಂದರು.
ಸಂಜಯ್ ರಾವತ್ ಅವರ ವಿರುದ್ದ ಕ್ರಮ ಕೈಗೊಳ್ಳದಂತೆ ಮನವಿ ಮಾಡಲು ಶರದ್ ಪವಾರ್ ಪ್ರಧಾನಿಯನ್ನು ಭೇಟಿ ಮಾಡುತ್ತಾರೆ. ಆದರೆ ನವಾಬ್ ಮಲಿಕ್ ಪರ ಅವರು ಆ ಕೆಲಸವನ್ನು ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದ ಅವರು, ಮುಸ್ಲಿಮರು ಜೈಲಿಗೆ ಹೋದರೂ ಪರವಾಗಿಲ್ಲ, ಆದರೆ ಬಿಜೆಪಿ, ಎನ್ಸಿಪಿ, ಕಾಂಗ್ರೆಸ್, ಮತ್ತಿತರ ಜಾತ್ಯಾತೀತ ಪಕ್ಷಗಳ ನಾಯಕರು ಜೈಲಿಗೆ ಹೋಗಬಾರದು ಎಂಬುದು ಇವರ ಉದ್ದೇಶವಾಗಿದೆ ಎಂದು ಕಿಡಿ ಕಾರಿದರು.
ನವಾಬ್ ಮಲಿಕ್ ಮತ್ತು ಸಂಜಯ್ ರಾವತ್ ಇಬ್ಬರೂ ನಿಮಗೆ ಸಮಾನರಲ್ಲವೇ? ಯಾಕೆ ಅವರ ಪರ ಮಾತನಾಡಲಿಲ್ಲ? ಅವರು ಮುಸ್ಲಿಂ ಎಂಬ ಕಾರಣಕ್ಕಾಗಿಯೋ ಎಂದು ಇದೇ ವೇಳೆ ಓವೈಸಿ ಪ್ರಶ್ನಿಸಿದರು. ಭಿವಂಡಿ ನಾಯಕ ಖಾಲಿದ್ ಗುಡ್ಡು ಅವರ ಮೇಲೆ ತಪ್ಪು ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಅವರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.