ಪಣಜಿ, ಮೇ 28 (DaijiworldNews/DB): ಗೋವಾದ ವಿವಿಧ ಪಕ್ಷಗಳ ಐವರು ಶಾಸಕರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಆದರೆ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಸಂಬಂಧ ವರಿಷ್ಠರಿಂದ ಅನುಮತಿ ಇನ್ನೂ ಸಿಕ್ಕಿಲ್ಲ ಎಂದು ಗೋವಾ ಬಿಜೆಪಿ ಉಸ್ತುವಾರಿ ಸಿ.ಟಿ. ರವಿ ಹೇಳಿದ್ದಾರೆ.
ಪಣಜಿಯಲ್ಲಿ ಶನಿವಾರ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ವರಿಷ್ಠರ ಅನುಮತಿ ಸಿಕ್ಕ ಬಳಿಕ ಇತರ ಪಕ್ಷಗಳ ಶಾಸಕರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಗುವುದು. ಗೋವಾದಲ್ಲಿ 25 ಮಂದಿ ಶಾಸಕರು ಈಗಾಗಲೇ ಸರ್ಕಾರಕ್ಕೆ ಬೆಂಬಲ ಸೂಚಿಸಿದವರಿದ್ದಾರೆ. ಇನ್ನೂ ಐವರು ಶಾಸಕರು ಬಂದಲ್ಲಿ ಪಕ್ಷದ ಶಾಸಕರ ಸಂಖ್ಯೆ 30ಕ್ಕೆ ಏರಲಿದೆ ಎಂದರು.
ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾತನಾಡಿ, ಕಳೆದ ಐವತ್ತು ವರ್ಷಗಳಲ್ಲಿ ಕಳಪೆಯಾಗಿದ್ದ ಗೋವಾ ಅಭಿವೃದ್ದಿ ಎಂಟೇ ವರ್ಷದಲ್ಲಿ ಹೇಗಾಗಿದೆ ಎಂಬುದನ್ನು ಜನ ಗಮನಿಸಬೇಕು. ಐವತ್ತು ವರ್ಷಗಳಲ್ಲಿ ಸಾಧ್ಯವಾಗದನ್ನು ಬಿಜೆಪಿ ಎಂಟು ವರ್ಷದಲ್ಲಿ ಮಾಡಿ ತೋರಿಸಿದೆ. ಮೋಪಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗಸ್ಟ್ 15 ರಂದು ಲೋಕಾರ್ಪಣೆಗೊಳ್ಳಲಿದೆ. ಪ್ರವಾಸೋದ್ಯಮದ ದೃಷ್ಟಿಯಿಂದ ಇದು ಇನ್ನಷ್ಟು ಆಕರ್ಷಣೆಗೊಳ್ಳಲಿದೆ ಎಂದು ತಿಳಿಸಿದರು.
ಕೇಂದ್ರ ಸಚಿವ ಶ್ರೀಪಾದ ನಾಯ್ಕ, ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ತಾನಾವಡೆ, ಸಚಿವ ಮಾವಿನ್ ಗುದಿನ್ಹೊ, ವಿಶ್ವಜಿತ್ ರಾಣೆ, ರೋಹನ್ ಖಂವಟೆ, ದಾಮು ನಾಯ್ಕ ಉಪಸ್ಥಿತರಿದ್ದರು.