ಭೋಪಾಲ್, ಮೇ 28 (DaijiworldNews/DB): ಹದಿನೈದು ದಿನಗಳ ಹಿಂದಷ್ಟೇ ಮದುವೆಯಾಗಿದ್ದ ಎನ್ಎಸ್ಯುಐ ಮುಖಂಡರೊಬ್ಬರು ಮುಖ್ಯಮಂತ್ರಿ ಕನ್ಯಾದಾನ ಯೋಜನೆಯ ಲಾಭ ಪಡೆಯುವ ಉದ್ದೇಶದಿಂದ ಮರು ಮದುವೆಯಾಗಲು ಯತ್ನಿಸಿದ ಘಟನೆ ಭೋಪಾಲ್ನಲ್ಲಿ ನಡೆದಿದೆ.
ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಸಂಯೋಜಕ ನೈತಿಕ್ ಚೌಧರಿ ಅವರೇ ಮತ್ತೆ ಮದುವೆಯಾಗಲು ಹೊರಟ ಮುಖಂಡ. ಚೌಧರಿ ಅವರಿಗೆ ಹದಿನೈದು ದಿನದ ಹಿಂದಷ್ಟೇ ಮದುವೆಯಾಗಿತ್ತು. ಆದರೆ ಮುಖ್ಯಮಂತ್ರಿ ಕನ್ಯಾದಾನ ಯೋಜನೆಯ ಲಾಭ ಪಡೆಯುವ ಉದ್ದೇಶದಿಂದ ತಮ್ಮ ಪತ್ನಿಯನ್ನು ಮರು ಮದುವೆ ಮಾಡಿಕೊಳ್ಳಲು ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಬಾಲಾಜಿ ದೇವಸ್ಥಾನದ ಆವರಣದಲ್ಲಿ ನಡೆದ ಸಾಮೂಹಿಕ ವಿವಾಹ ಸಮಾವೇಶಕ್ಕೆ ಚೌಧರಿ ಆಗಮಿಸಿದ್ದರು. ಆದರೆ ಅವರು ಸಾಮೂಹಿಕ ಮದುವೆಯಾಗಲಿದ್ದ ಮದುಮಕ್ಕಳ ಸಾಲಿನಲ್ಲಿ ಕುಳಿತ್ತಿದ್ದಾಗ ಸಂಘಟಕರ ಗಮನಕ್ಕೆ ಬಂದಿದೆ. ತತ್ಕ್ಷಣ ಸಂಘಟಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಧಾವಿಸಿ ನೈತಿಕ್ನನ್ನು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ವಿಚಾರವು ಇದೀಗ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಟ್ವೀಟ್ ವಾರ್ಗೂ ಕಾರಣವಾಗಿದೆ. ಬಿಜೆಪಿ ರಾಜ್ಯ ಮಾಧ್ಯಮ ಉಸ್ತುವಾರಿ ಲೋಕೇಂದ್ರ ಪರಾಶರ್ ಟ್ವೀಟ್ ಮಾಡಿ ಎನ್ಎಸ್ಯುಐನ ರಾಷ್ಟ್ರೀಯ ಸಂಯೋಜಕ ಮುಖ್ಯಮಂತ್ರಿಗಳ ಕನ್ಯಾದಾನ ಯೋಜನೆಯ ಲಾಭ ಪಡೆಯಲು ಮರು ಮದುವೆಯಾಗಲು ಹೊರಟು ಪೊಲೀಸರ ಅತಿಥಿಯಾಗಿದ್ದಾರೆ. ಈ ಬಗ್ಗೆ ನೀವೇನು ಹೇಳುತ್ತೀರಿ ಕಮಲ್ ನಾಥ್ ಎಂದು ಪ್ರಶ್ನಿಸಿದ್ದಾರೆ.