ಬೆಂಗಳೂರು, ಮೇ 28 (DaijiworldNews/HR): ದಲಿತರ ಮೇಲಿನ ದೌರ್ಜನ್ಯಗಳನ್ನು ಬಿಜೆಪಿ ತಲೆಗೆ ಕಟ್ಟುವ ಕಾಂಗ್ರೆಸ್ ಕಲಬುರ್ಗಿಯ ದಲಿತನ ಹತ್ಯೆಯನ್ನು ಸಮರ್ಥಿಸುತ್ತಿರುವುದೇಕೆ? ಆರೋಪಿಗಳ ಸಮುದಾಯದ ಮತ ತಪ್ಪುತ್ತದೆ ಎಂಬ ಭಯವೇ? ದಲಿತರ ಮೇಲೆ ಮತಾಂಧರು ಮಾಡುವ ದೌರ್ಜನ್ಯ ಕಾಂಗ್ರೆಸ್ ಪಕ್ಷಕ್ಕೆ ಒಪ್ಪಿತವೇ? ಎಂದು ಬಿಜೆಪಿ ಪ್ರಶ್ನಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ಕರ್ನಾಟಕ, ದಲಿತರ ಮೇಲೆ ಮತಾಂಧರು ಮಾಡುವ ದೌರ್ಜನ್ಯ, ಕ್ರೌರ್ಯ, ಕೊಲೆ ಅತ್ಯಾಚಾರಗಳ ಬಗ್ಗೆ ಕಾಂಗ್ರೆಸ್ ಪಕ್ಷ ಏಕೆ ಮೌನವಾಗಿರುತ್ತದೆ? ಕಾಂಗ್ರೆಸ್ ನಾಯಕರಿಗೆ ಧರ್ಮಾಂಧರ, ಮತಾಂಧರ ಮೇಲಿರುವ ಮೃದು ಧೋರಣೆ, ದಲಿತರ ಮೇಲೆ ಏಕಿಲ್ಲ? ಎಂದು ಪ್ರಶ್ನಿಸಿದೆ.
ಇನ್ನು ಅಂದು, ಕಾಂಗ್ರೆಸ್ ಶಾಸಕ, ದಲಿತ ನಾಯಕ ಅಖಂಡ ಶ್ರೀನಿವಾಸಮೂರ್ತಿ ಮನೆಯನ್ನು ಮತಾಂಧರು ಸುಟ್ಟಾಗ ಕಾಂಗ್ರೆಸ್ ನಾಯಕರಿಗೆ ದಲಿತ ನಾಯಕನ ಕೂಗು ಕೇಳಿಸಲೇ ಇಲ್ಲ. ಇಂದು, ಕಲಬುರ್ಗಿಯ ದಲಿತ ಯುವಕನನ್ನು ಧರ್ಮಾಂಧರು ಹತ್ಯೆ ಮಾಡಿದಾಗ ಕಾಂಗ್ರೆಸ್ಸಿಗರು ಇದಕ್ಕೆ ಮತೀಯ ಬಣ್ಣ ಬಳಿಯಬೇಡಿ ಎಂದು ಪ್ರವಚನ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.