ಬೆಂಗಳೂರು, ಮೇ 28 (DaijiworldNews/HR): ಅಗತ್ಯ ವಸ್ತುಗಳ ಬೆಲೆ ಸೇರಿದಂತೆ ಎಲ್ಲದರ ದರವೂ ಹೆಚ್ಚಾಗುತ್ತಿದೆ. ವರ್ಷಕ್ಕೆ ಶೇಕಡ 30ರಷ್ಟು ನಿರ್ವಹಣಾ ವೆಚ್ಚ ಅಧಿಕವಾಗುತ್ತಿದೆ. ಆದರೆ ವೇತನ ಮಾತ್ರ ಶೇಕಡ 5-8ರಷ್ಟು ಮಾತ್ರ ಏರಿಕೆ ಆಗುತ್ತಿದೆ. ಇದರಿಂದ ಜನರು ಜೀವನ ನಡೆಸಬೇಕಾ, ಬೀದಿ ಪಾಲಾಗಬೇಕಾ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಈ ಕುರಿತು ಟ್ವಿಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಈ ಈಶ್ವರಪ್ಪನ ಬಾಯಿ ಕೊಳೆತು ನಾರುತ್ತಿರುವ ಬಚ್ಚಲೇ ಸರಿ. ಈ ಈಶ್ವರಪ್ಪನ ಹಣದಾಹಕ್ಕೆ ಕಮಿಷನ್ ದಾಹಕ್ಕೆ ಅಮಾಯಕ ಸಂತೋಷ್ ಪಾಟೀಲ್ ಹೆಣವಾದ. ಇಂಥ ಲಜ್ಜೆಗೇಡಿ ಮನುಷ್ಯನಿಗೆ ಸಿದ್ದರಾಮಯ್ಯನವರ ಬಗ್ಗೆ ಮಾತಾಡುವ ನಯಾಪೈಸೆ ಯೋಗ್ಯತೆಯೂ ಇಲ್ಲ ಎಂದಿದೆ.
ಇನ್ನು ದೇಶದ ಅರ್ಥ ವ್ಯವಸ್ಥೆಯ ಪತನಕ್ಕೆ ನಾಂದಿಯಾಗಿದ್ದ ನೋಟು ರದ್ದತಿಯನ್ನು ಸಮರ್ಥಿಸಿಕೊಳ್ಳಲು ಬಿಜೆಪಿ ಹೇಳುತ್ತಿದ್ದ ಕಾರಣ 'ಕಪ್ಪು ಹಣ'! ಅವೈಜ್ಞಾನಿಕವಾಗಿ 2000 ಮುಖಬೆಲೆಯ ನೋಟುಗಳನ್ನು ಹೊರತಂದು ಮಾಡಿದ ಸಾಧನೆ ಏನು? 'ಕಪ್ಪು ಹಣ' ಕೂಡಿಡುವವರಿಗೆ ಸಹಕಾರವೇ? ಗಣನೀಯ ಪ್ರಮಾಣದಲ್ಲಿ 2000 ನೋಟುಗಳು ಚಲಾವಣೆಯಿಂದ ಕಣ್ಮರೆಯಾಗಿವೆ ಎಂದರೆ ಏನರ್ಥ? ಎಂದು ಪ್ರಶ್ನಿಸಿದೆ.