ಬೆಂಗಳೂರು, ಮೇ 28 (DaijiworldNews/DB): ಸಿದ್ದರಾಮಯ್ಯ ಅವರು ದ್ರಾವಿಡರಾ ಅಥವಾ ಆರ್ಯರಾ? ಅವರು ಬಂದಿರುವುದು ಎಲ್ಲಿಂದ ಎಂಬುದನ್ನು ಮೊದಲು ಹೇಳಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಆರ್ಎಸ್ಎಸ್ ಮೂಲ ಕೆದಕಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.
ಚೀನಾ ಭಾರತದ ಮೇಲೆ ಆಕ್ರಮಣ ಮಾಡಿದಾಗ ಸ್ಪಷ್ಟ ಕ್ರಮ ತೆಗೆದುಕೊಳ್ಳದೆ ನೆಹರೂ ಭಾರತದ ಗಡಿ ಭಾಗವನ್ನೇ ಬಿಟ್ಟುಕೊಟ್ಟಿದ್ದಾರೆ. ಆದರೆ ಮೋದಿ ಗಟ್ಟಿಯಾಗಿ ನಿಂತು ಚೀನಾ ಅಕ್ರಮಕ್ಕೆ ಸರಿಯಾದ ಉತ್ತರ ನೀಡಿ ಗಡಿ ಉಳಿಸಿಕೊಂಡಿದ್ದಾರೆ. ಪಾಕಿಸ್ತಾನದ ಅಕ್ರಮಗಳಿಗೂ ದಿಟ್ಟ ಉತ್ತರವನ್ನು ನೀಡಿದ ಹೆಗ್ಗಳಿಕೆ ಮೋದಿಯವರದ್ದು. ಭಾರತವನ್ನು ಶಕ್ತಿಶಾಲಿಯನ್ನಾಗಿ ಮಾಡಿರುವುದೇ ಪ್ರಧಾನಿ ಮೋದಿಯವರು. ಅವರೊಂದಿಗೆ ನೆಹರೂ ಹೋಲಿಕೆ ಮಾಡಲು ಆಗುವುದಿಲ್ಲ ಎಂದು ಬೊಮ್ಮಾಯಿ ಈ ವೇಳೆ ತಿಳಿಸಿದರು.
ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯಿಂದ ರೋಹಿತ್ ಚಕ್ರತೀರ್ಥರನ್ನು ಕೈ ಬಿಡಬೇಕೆಂಬ ಆಗ್ರಹದ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಏನೇನು ಬೆಳವಣಿಗೆ ಆಗಿದೆ ಎಂಬ ಬಗ್ಗೆ ಶಿಕ್ಷಣ ಸಚಿವರಿಂದ ಮಾಹಿತಿ ಪಡೆದುಕೊಳ್ಳುತ್ತೇನೆ. ಬಳಿಕ ಮುಂದುವರೆಯುತ್ತೇವೆ ಎಂದು ತಿಳಿಸಿದರು.
ಹಿಜಾಬ್ ವಿಚಾರವಾಗಿ ಈಗಾಗಲೇ ಕೋರ್ಟ್ ಆದೇಶ ನೀಡಿರುವುದರಿಂದ ಅದನ್ನು ಎಲ್ಲರೂ ಪಾಲಿಸಬೇಕು. ಅನಗತ್ಯ ವಿವಾದ ಸೃಷ್ಟಿಸುವುದು ಸಲ್ಲ. ಮಂಗಳೂರು ವಿವಿ ಸಿಂಡಿಕೇಟ್ ಏನು ನಿರ್ಧಾರ ತೆಗೆದುಕೊಂಡಿದೆಯೋ ಅದನ್ನು ಅಲ್ಲಿನ ವಿದ್ಯಾರ್ಥಿನಿಯರು ಪಾಲನೆ ಮಾಡಬೇಕು. ಹಿಜಾಬ್ ವಿಚಾರ ಬಿಟ್ಟು ವಿದ್ಯಾರ್ಜನೆಯತ್ತ ವಿದ್ಯಾರ್ಥಿಗಳು ಗಮನ ಕೊಡಬೇಕು ಎಂದು ಮನವಿ ಮಾಡಿದರು.
ಬೆಳಗಾವಿಯ ಮದುವೆ ಮೆರವಣಿಗೆ ಮೇಲೆ ದಾಳಿ ಮಾಡಿದ ಎಂಇಎಸ್ ಕಾರ್ಯಕರ್ತರ ಪುಂಡಾಟಿಕೆ ಖಂಡನೀಯ. ಹಲ್ಲೆ ನಡೆಸಿದವರ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಕನ್ನಡಿಗರಿಗೆ ತೊಂದರೆಯಾದರೆ ಸರ್ಕಾರ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.