ಬೆಂಗಳೂರು, ಮೇ 28 (DaijiworldNews/DB): ಪೆಟ್ರೋಲ್-ಡೀಸೆಲ್ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ಕಡಿತಗೊಳಿಸಿ ಇಂಧನ ಬೆಲೆಯನ್ನು ಕಡಿಮೆಗೊಳಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಪ್ರಕಟಿಸಿ ಒಂದು ವಾರ ಕಳೆಯಿತು. ಆದರೆ ಬೆಲೆ ಇಳಿಕೆ ಕುರಿತು ಕರ್ನಾಟಕ ಸರ್ಕಾರ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.
ಪೆಟ್ರೋಲ್ಗೆ ಲೀಟರ್ಗೆ 8 ರೂ. ಮತ್ತು ಡೀಸೆಲ್ಗೆ ಲೀಟರ್ಗೆ 6 ರೂ. ಅಬಕಾರಿ ಸುಂಕವನ್ನು ಇಳಿಸುವುದಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ಒಂದು ವಾರದ ಹಿಂದೆ ಪ್ರಕಟಿಸಿದ್ದರು. ಕೇಂದ್ರ ಪ್ರಕಟಣೆ ಹೊರಡಿಸಿದ ಬೆನ್ನಲ್ಲೇ ರಾಜಸ್ಥಾನ, ಕೇರಳ, ಮಹಾರಾಷ್ಟ್ರ ಸರ್ಕಾರಗಳು ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆ ಮಾಡಿದ್ದವು. ಆದರೆ ಪ್ರಕಟನೆ ಹೊರಡಿಸಿ ವಾರ ಕಳೆದರೂ ಕರ್ನಾಟಕದಲ್ಲಿ ಈ ಬಗ್ಗೆಇನ್ನೂ ಯಾವುದೇ ಚರ್ಚೆ ಆಗಿಲ್ಲ.
ಕೇಂದ್ರದ ಪ್ರಕಟಣೆ ಬಳಿಕ ದರ ಇಳಿಕೆ ಮಾಡುವ ಬಗ್ಗೆ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು. ಇದೀಗ ಶನಿವಾರ ಸುದ್ದಿಗಾರರು ಈ ಪ್ರಶ್ನೆ ಕೇಳಿದಾಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಸಂಬಂಧ ಇನ್ನೂ ಯಾವುದೇ ಚರ್ಚೆ ಆಗಿಲ್ಲ. ಸಂಪುಟದಲ್ಲಿ ಈ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದಿದ್ದಾರೆ.