ಬೆಂಗಳೂರು, ಮೇ 28 (DaijiworldNews/MS): 545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆಸಿದ ಸಿಐಡಿ ಅಧಿಕಾರಿಗಳು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಪ್ರಕರಣದ ಕಿಂಗ್ ಪಿನ್ ರುದ್ರಗೌಡ ಪಾಟೀಲ್ ಸಹಚರನಾದ ಅಫಜಲಪುರ ತಾಲ್ಲೂಕಿನ ಸೊನ್ನ ಗ್ರಾಮದ ಪ್ರಕಾಶ ಕಲ್ಲೂರ ಎಂಬ ಆರೋಪಿಯನ್ನು ಶುಕ್ರವಾರ ಬಂಧಿಸಿದ್ದಾರೆ.
ಅಫಜಲಪುರ ತಾಲ್ಲೂಕಿನ ದೇಸಾಯಿ ಕಲ್ಲೂರ ಗ್ರಾಮದ ಪ್ರಕಾಶ ಪ್ರಕರಣದ ಮತ್ತೊಬ್ಬ ಆರೋಪಿ ರುದ್ರಗೌಡ ಡಿ.ಪಾಟೀಲ ಜೊತೆ ಹಲವು ವರ್ಷಗಳಿಂದ ಮನೆ ಮತ್ತು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಇಲ್ಲಿನ ಎಚ್ಕೆಇ ಸಂಸ್ಥೆಯ ಎಂ.ಎಸ್.ಇರಾನಿ ಪದವಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಬ್ಲೂಟೂತ್ ಬಳಸಿ ಪರೀಕ್ಷೆ ಬರೆದಿದ್ದ ಪ್ರಭು ಎಂಬ ಅಭ್ಯರ್ಥಿಗೆ ಬ್ಲೂಟೂತ್ ಕೊಟ್ಟು, ಹಣ ಪಡೆದ ಆರೋಪ ಪ್ರಕಾಶ ಮೇಲಿದೆ. ಸಿಐಡಿ ವಶದಲ್ಲಿರುವ ರುದ್ರಗೌಡ ನೀಡಿದ ಮಾಹಿತಿ ಆಧರಿಸಿ ಪ್ರಕಾಶಗೆ ಬಂಧಿಸಲಾಗಿದೆ. ಶುಕ್ರವಾರ ವಿಚಾರಣೆ ನಡೆಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಆರೋಪಿ ಪ್ರಕಾಶ್ ನನ್ನು 13 ದಿನಗಳ ಕಾಲ ಸಿಐಡಿ ಕಸ್ಟಡಿಗೆ ಕೋರ್ಟ್ ನೀಡಿದೆ.