ಚಿಕ್ಕಮಗಳೂರು, ಮೇ 27 (DaijiworldNews/DB): ಸಿದ್ದರಾಮಯ್ಯ ಅವರ ಮೈಮೇಲೆ ಆಗಾಗ ಮಕಾಲೆ ಭೂತ ಬರುತ್ತದೆ .ಭೂತ ಮೈಮೇಲೆ ಬರುವಾಗ ಅವರು ಏನೇನೋ ಮಾತನಾಡುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಲೇವಡಿ ಮಾಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೆಸ್ಸೆಸ್ನವರು ಭಾರತೀಯರಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು. ಮಹಾತ್ಮಗಾಂಧಿ, ಸರ್ದಾರ್ ವಲ್ಲಭಬಾಯಿ ಪಟೇಲ್, ಭಗತ್ ಸಿಂಗ್, ರಾಜಗುರು ಯಾರೂ ಕೂಡ ಭಾರತೀಯರಲ್ಲ ಎಂಬುದು ಸಿದ್ದರಾಮಯ್ಯ ಲೆಕ್ಕಾಚಾರವಿರಬಹುದು. ಮಾತುಗಳು ಪ್ರಚೋದನೆಯಾಗಬಾರದು.ಪ್ರೇರಣೆಯಾಗುವಂತಿರಬೇಕು. ದೇಶಭಕ್ತಿಯ ಮಾತುಗಳನ್ನು ಆಡುವುದನ್ನು ಅವರು ಮೊದಲು ಕಲಿಯಬೇಕು ಎಂದು ಸಿ.ಟಿ. ರವಿ ಸಲಹೆ ಮಾಡಿದರು.
ಭೂತ ಮೈಮೇಲೆ ಬಂದಾಗ ಸಿದ್ದರಾಮಯ್ಯ ಇಂತಹ ಮಾತುಗಳನ್ನು ಆಡುತ್ತಾರೆ. ನೆಹರೂ ಮತ್ತು ಮೋದಿಯವರಿಗೆ ಹೋಲಿಕೆ ಮಾಡಲು ಆಗುವುದಿಲ್ಲ. ಅಂತೆಯೇ ಯಾರನ್ನು ಯಾರಿಗೂ ಹೋಲಿಕೆ ಮಾಡಲು ಆಗುವುದಿಲ್ಲ ಎಂದರು.