ನವದೆಹಲಿ, ಮೇ 27 (DaijiworldNews/DB): ಪೆರೋಲ್ ಮೇಲೆ ಹೊರ ಬಂದ ದೆಹಲಿ ಗಲಭೆ ಪ್ರಕರಣದ ಆರೋಪಿ ಶಾರೂಖ್ ಪಠಾಣ್ ಗೆ ಅದ್ದೂರಿ ಸ್ವಾಗತ ಕೋರಿ ಆತನ ಪರವಾಗಿ ಘೋಷಣೆ ಕೂಗಿದ ಘಟನೆ ನಡೆದಿದೆ. ಸದ್ಯ ಈ ಫೋಟೋ, ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಅನಾರೋಗ್ಯದಿಂದ ಬಳಲುತ್ತಿರುವ ತಂದೆಯನ್ನು ಭೇಟಿಯಾಗಲು 4 ಗಂಟೆಗಳ ಕಾಲ ಪೆರೋಲ್ ಮೇಲೆ ಆತ ಹೊರ ಬಂದಿದ್ದ. ಅನಾರೋಗ್ಯಕ್ಕೊಳಗಾದ ತಂದೆಯನ್ನು ಭೇಟಿಮಾಡುವುದಕ್ಕಷ್ಟೇ ಮಾನವೀಯ ನೆಲೆಯಲ್ಲಿ ಅವಕಾಶ ನೀಡಲಾಗುತ್ತದೆ ಎಂದು ಪೆರೋಲ್ ನೀಡುವ ವೇಳೆ ನ್ಯಾಯಾಲಯ ಹೇಳಿತ್ತು. ಆದರೆ ಆತ ಹೊರ ಬಂದ ತತ್ಕ್ಷಣ ಅಲ್ಲಿ ಸೇರಿದ್ದ ಕೆಲವರು ಶಾರೂಖ್ ಪಠಾಣ್ ಪರ ಘೋಷಣೆ ಕೂಗಿದ್ದಲ್ಲದೆ, ಅದ್ದೂರಿಯಾಗಿ ಬರಮಾಡಿಕೊಂಡಿರುವುದು ವೀಡಿಯೋದಲ್ಲಿ ದಾಖಲಾಗಿದೆ.
ಈಶಾನ್ಯ ದೆಹಲಿಯಲ್ಲಿ 2020ರಲ್ಲಿ ನಡೆದಿದ್ದ ಗಲಭೆಯಲ್ಲಿ ಈತ ಪ್ರಮುಖ ಆರೋಪಿಯಾಗಿದ್ದ. ಜಫ್ರಾಬಾದ್ ಪ್ರದೇಶದಲ್ಲಿ ಪೊಲೀಸರತ್ತ ಪಿಸ್ತೂಲ್ ತೋರಿಸಿ ಉದ್ದಟತನ ಮೆರೆದಿದ್ದ. ಈ ವೇಳೆ ಆತನ ಬಳಿಯಿಂದ ಅಕ್ರಮ ಪಿಸ್ತೂಲು ಮತ್ತು ಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಗಲಭೆಯಲ್ಲಿ 50 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಬಳಿಕ 2021 ಮಾ.3 ರಂದು ಆತನನ್ನು ಬಂಧಿಸಲಾಗಿತ್ತು.