ಹುಬ್ಬಳ್ಳಿ, ಮೇ 27 (DaijiworldNews/DB): ಬಿಜೆಪಿಗೆ ತೃತೀಯ ಅಲ್ಲ, ನಾಲ್ಕನೇ ರಂಗ ಬಂದರೂ ಸರಿಸಾಟಿಯಾಗದು. ಬಿಜೆಪಿಗೆ ಬಿಜೆಪಿಯೇ ಸಾಟಿ ಎಂದು ತೃತೀಯ ರಂಗ ರಚನೆ ಪ್ರಯತ್ನವನ್ನು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಲೇವಡಿ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಬಿಜೆಪಿಯು ಪ್ರಬಲ ಶಕ್ತಿಯಾಗಿ ದೇಶದಲ್ಲಿ ಉತ್ತುಂಗಕ್ಕೇರುತ್ತಿದೆ. ಅವರು ಎಷ್ಟು ರಂಗವನ್ನು ಬೇಕಾದರೂ ಮಾಡಿಕೊಳ್ಳಲಿ. ಅದರಿಂದ ಬಿಜೆಪಿಗೆ ಯಾವುದೇ ಸಮಸ್ಯೆಯಾಗದು ಎಂದರು.
ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರಾವ್, ಜೆಡಿಎಸ್ ವರಿಷ್ಠಎಚ್. ಡಿ. ದೇವೇಗೌಡ ಮತ್ತುಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನಡುವೆ ಬೆಂಗಳೂರಿನಲ್ಲಿ ಗುರುವಾರ ನಡೆದ ತೃತೀಯ ರಂಗ ರಚನೆ ಮಾತುಕತೆ ಕುರಿತು ಅವರು ಈ ಪ್ರತಿಕ್ರಿಯೆ ನೀಡಿದರು.
ಜಾರಿ ನಿರ್ದೇಶನಾಲಯವನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯವಾಗಿ ಆರೋಪ ಮಾಡುವುದು ಒಂದು ಕಡೆಯಾದರೆ, ಕಾನೂನಿನ ಮೇಲೆ ಗೌರವವಿದೆ ಎನ್ನುವುದು ಇನ್ನೊಂದು ಕಡೆ. ಇದು ಅವರಿಗೆ ಅಭ್ಯಾಸವಾಗಿದೆ. ಅವರಿಗೆ ಕಾನೂನಿನ ಮೇಲೆ ಗೌರವಿದ್ದರೆ ಮತ್ತು ಏನೂ ತಪ್ಪು ಮಾಡಿಲ್ಲ ಎಂದಾದಲ್ಲಿ ರಾಜಕೀಯ ಮಾಡದೆ ಕಾನೂನು ರೀತ್ಯಾ ಹೋರಾಟ ಮಾಡಲಿ ಎಂದರು.