ಉತ್ತರಾಖಂಡ್, ಮೇ 27 (DaijiworldNews/MS): ತಮ್ಮ ಮೊಮ್ಮಗಳಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ಉತ್ತರಾಖಂಡ್ ನ ಮಾಜಿ ಸಚಿವ ರಾಜೇಂದ್ರ ಬಹುಗುಣ ವಿರುದ್ಧ ಸೊಸೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಮೂರು ದಿನಗಳ ನಂತರ ಬಹುಗುಣ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
59ವರ್ಷ ಬಹುಗುಣ ಅವರು ಮೊದಲು ನೀರಿನ ಟ್ಯಾಂಕ್ಗೆ ಹತ್ತಿದ್ದು, ಪೊಲೀಸರು ಮತ್ತು ದಾರಿಹೋಕರು ಗಾಬರಿಯಿಂದ ನೋಡುತ್ತಿರುವಾಗ ಅಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
"ಬಹುಗುಣ ಅವರ ಸೊಸೆಯ ದೂರಿನ ಮೇರೆಗೆ ಇತ್ತೀಚೆಗೆ ಪೋಕ್ಸೊ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಹಲ್ದ್ವಾನಿಯ ಭಗತ್ ಸಿಂಗ್ ಕಾಲೋನಿಯಲ್ಲಿರುವ ನೀರಿನ ಟ್ಯಾಂಕ್ಗೆ ಏರುವ ಮೊದಲು ಅವರು ಸ್ವತಃ '112' (ತುರ್ತು ಸಂಖ್ಯೆ) ಗೆ ಕರೆ ಮಾಡಿದ್ದರು. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಗುಂಡು ಹೊಡೆದುಕೊಳ್ಳದಂತೆ ಧ್ವನಿವರ್ಧಕದ ಮೂಲಕ ವಿನಂತಿಸಿಕೊಂಡಿದ್ದರು. ಆದರೆ ಟ್ಯಾಂಕ್ ಮೇಲೆ ನಿಂತಿದ್ದ ಬಹುಗುಣ ತಮ್ಮ ಎದೆಗೆ ಗುಂಡು ಹೊಡೆದುಕೊಂಡು ಸಾವನ್ನಪ್ಪಿದ್ದಾರೆ "ಎಂದು ಹಿರಿಯ ಪೊಲೀಸ್ ಅಧಿಕಾರಿ ಪಂಕಜ್ ಭಟ್ ತಿಳಿಸಿದ್ದಾರೆ.
ಬಹುಗುಣ ಅವರ ಸೊಸೆಯು "ವೈವಾಹಿಕ ಜೀವನದಲ್ಲೂ ಭಿನ್ನಾಭಿಪ್ರಾಯ ಹೊಂದಿದ್ದು ಪತಿ ಅಜಯ್ ಬಹುಗುಣ ಅವರಿಂದಲೂ ದೂರವಿದ್ದು ಮಹಡಿಯಲ್ಲಿ ವಾಸಿಸುತ್ತಿದ್ದಾರೆ .
ಬಹುಗುಣ ಅವರ ಮಗ ತನ್ನ ತಂದೆಯ ಆತ್ಮಹತ್ಯೆಗೆ "ಪ್ರಚೋದನೆ" ಗಾಗಿ ಪತ್ನಿ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ಈ ವಿಷಯದ ಬಗ್ಗೆ ಶೀಘ್ರದಲ್ಲೇ ತನಿಖೆಯನ್ನು ಪ್ರಾರಂಭಿಸಲಿದ್ದಾರೆ" ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ರಾಜೇಂದ್ರ ಬಹುಗುಣ 2004ರಲ್ಲಿ ಉತ್ತರಾಖಂಡ್ ನ ಎನ್ ಡಿ ತಿವಾರಿ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು