ನವದೆಹಲಿ, ಮೇ 27 (DaijiworldNews/HR): ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಯಾಣದ ಮಾಜಿ ಸಿಎಂ ಓಂಪ್ರಕಾಶ್ ಚೌಟಾಲಾಗೆ ದೆಹಲಿಯ ವಿಶೇಷ ಸಿಬಿಐ ಕೋರ್ಟ್ ನಾಲ್ಕು ವರ್ಷಗಳ ಜೈಲು ಶಿಕ್ಷೆ ಮತ್ತು 50 ಲಕ್ಷ ರೂ.ದಂಡ ವಿಧಿಸಿ ತೀರ್ಪು ನೀಡಿದೆ.
1993ರಿಂದ 2006ರವರೆಗೆ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದೋಷಿಯಾಗಿರುವ ಚೌಟಾಲಾ ಹಾಗೂ ಸಿಬಿಐ ಪರ ವಕೀಲರ ವಾದವನ್ನು ವಿಶೇಷ ನ್ಯಾಯಾಧೀಶ ವಿಕಾಸ್ ಧುಲ್ ಗುರುವಾರ ಆಲಿಸಿದ್ದು, ಚೌಟಾಲಾ ಅವರ ವೈದ್ಯಕೀಯ ಸಮಸ್ಯೆ ಮತ್ತು ವೃದ್ಧಾಪ್ಯವನ್ನು ಉಲ್ಲೇಖಿಸಿ ಅವರಿಗೆ ಕನಿಷ್ಠ ಶಿಕ್ಷೆಯನ್ನು ನೀಡಬೇಕೆಂದು ನ್ಯಾಯಾಲಯವನ್ನು ಒತ್ತಾಯಿಸಲಾಗಿತ್ತು. ಸಿಬಿಐ, ಗರಿಷ್ಠ ಶಿಕ್ಷೆ ವಿಧಿಸುವಂತೆ ಕೋರಿ, ಇದು ಸಮಾಜಕ್ಕೆ ಸಂದೇಶವನ್ನು ನೀಡಬೇಕು ಎಂದು ಹೇಳಿತ್ತು.
ಇನ್ನು 1993 ಮತ್ತು 2006 ರ ನಡುವೆ ಅಕ್ರಮ ಆಸ್ತಿಯನ್ನು ಗಳಿಸಿದ ಆರೋಪದ ಮೇಲೆ ಮಾರ್ಚ್ 26, 2010 ರಂದು ಚಾರ್ಜ್ ಶೀಟ್ ಸಲ್ಲಿಸಲಾಗಿದ್ದು, ಇದೀಗ ಹರಿಯಾಣ ಮಾಜಿ ಸಿಎಂ ಓಂಪ್ರಕಾಶ್ ಚೌಟಾಲಾಗೆ 4 ವರ್ಷಗಳ ಜೈಲು, ದಂಡ ವಿಧಿಸಲಾಗಿದೆ.