ಶ್ರೀರಂಗಪಟ್ಟಣ, ಮೇ 27 (DaijiworldNews/DB): ವ್ಯಕ್ತಿಯೊಬ್ಬ ತನ್ನದೇ ದುಬಾರಿ ಬೆಲೆಯ ಐಷಾರಾಮಿ ಬಿಎಂಡಬ್ಲ್ಯು ಕಾರನ್ನು ಕಾವೇರಿ ನದಿಯಲ್ಲಿ ಮುಳುಗಿಸಿದ ಘಟನೆ ಬುಧವಾರ ರಾತ್ರಿ ನಡೆದಿದೆ. ಬಳಿಕ ಮರುದಿನ ಪೊಲೀಸರು ಹರಸಾಹಸಪಟ್ಟು ಕಾರನ್ನು ನೀರಿನಿಂದ ಹೊರ ತೆಗೆದಿದ್ದಾರೆ.
ಕಾರಿನ ಮಾಲಕನನ್ನು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನಿವಾಸಿ ರೂಪೇಶ್ ಎಂದು ಗುರುತಿಸಲಾಗಿದೆ. ಬುಧವಾರ ರಾತ್ರಿ ಕಾರು ಚಲಾಯಿಸಿಕೊಂಡು ಬಂದ ರೂಪೇಶ್ ಗಂಜಾಂನ ನಿಮಿಷಾಂಬ-ಕರಿಘಟ್ಟ ಸೇತುವೆ ಕೆಳಭಾಗದ ಕಾವೇರಿ ನದಿಯ ನೀರಲ್ಲಿ ಏಕಾಏಕಿ ಕಾರನ್ನು ಮುಳುಗಿಸಿದ್ದಾರೆ. ಇದನ್ನು ಸ್ಥಳೀಯರು ನೋಡಿದ್ದು, ಮರುದಿನ ಪೊಲೀಸರಿಗೆ ದೂರು ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಹರಸಾಹಸಪಟ್ಟು ನೀರಿನಿಂದ ಕಾರನ್ನು ತೆಗೆದಿದ್ದಾರೆ.
ಕಾರಿನ ಮಾಲಕ ರೂಪೇಶ್ನನ್ನು ವಿಚಾರಿಸಿದಾಗ ಕಾರಿನಲ್ಲಿ ಬೆಂಗಳೂರಿನಿಂದ ಬರುವಾಗ ಅಪರಿಚಿತರು ಹಿಂಬಾಲಿಸಿಕೊಂಡು ನನ್ನನ್ನು ಕೊಲೆ ಮಾಡಲು ಬಂದಿದ್ದು, ಅದಕ್ಕಾಗಿ ನದಿಯೊಳಗೆ ಕಾರುಚಲಾಯಿಸಿದೆ ಎಂದಿದ್ದಾನೆ. ಬಳಿಕ ಬೇರೆಯೇ ಹೇಳಿಕೆ ನೀಡಿದ್ದಾನೆ. ಇದರಿಂದ ಗೊಂದಲಕ್ಕೊಳಗಾದ ಪೊಲೀಸರು ಶ್ರೀರಂಗಪಟ್ಟಣಕ್ಕೆ ರೂಪೇಶ್ನ ಸಂಬಂಧಿಕರನ್ನು ಕರೆಸಿ ವಿಚಾರಿಸಿದ್ದಾರೆ. ಈ ವೇಳೆ ಅನಾರೋಗ್ಯದಿಂದ ಇತ್ತೀಚೆಗೆ ತಾಯಿ ನಿಧನ ಹೊಂದಿದ್ದು, ಆ ಬಳಿಕ ಆತ ಮಾನಸಿಕ ಖಿನ್ನತೆಗೆ ಒಳಗಾಗಿದ್ದು ,ಈ ರೀತಿಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂಬುದು ತಿಳಿದು ಬಂದಿದೆ.