ನವದೆಹಲಿ, ಮೇ 27 (DaijiworldNews/DB): ಆಡಳಿತದಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳಲು ಹಿಂದಿನ ಆಡಳಿತದಲ್ಲಿ ಉದಾಸೀನತೆ ಇತ್ತು. ಇದರಿಂದಾಗಿ ಬಡ ಮತ್ತು ಮಧ್ಯಮ ವರ್ಗದವರು ತೊಂದರೆಗೊಳಗಾಗಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನವದೆಹಲಿಯಲ್ಲಿ ದೇಶದ ಅತಿದೊಡ್ಡ ಡ್ರೋನ್ ಉತ್ಸವ 'ಭಾರತ್ ಡ್ರೋನ್ ಮಹೋತ್ಸವ್' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, '2014ಕ್ಕೂ ಮೊದಲು ಆಡಳಿತದಲ್ಲಿ ತಂತ್ರಜ್ಞಾನಗಳ ಅಳವಡಿಕೆ ಇರಲಿಲ್ಲ. ಆದರೆ ಪ್ರಸ್ತುತ ಭಾರತ ತಂತ್ರಜ್ಞಾನ ಯುಗದಲ್ಲಿ ಉತ್ಸಾಹದಿಂದ ತೊಡಗಿಸಿಕೊಂಡಿದೆ. ಹಿಂದೆಲ್ಲ ತಂತ್ರಜ್ಞಾನವನ್ನು ಬಡವರ ವಿರೋಧಿ ಎಂದು ಸಮಸ್ಯೆ ಸೃಷ್ಟಿಸಲಾಗುತ್ತಿತ್ತು. ಇದರಿಂದ ಬಡ, ಮಧ್ಯಮ ವರ್ಗದವರು ಹಲವು ಸಮಸ್ಯೆಗಳಿಗೆ ಒಳಗಾಗಬೇಕಾಯಿತು ಎಂದು ವಿಷಾದಿಸಿದರು.
ಡ್ರೋನ್ ತಂತ್ರಜ್ಞಾನವು ಭಾರತದಲ್ಲಿ ವೇಗವಾಗಿ ದಾಪುಗಾಲಿಡುತ್ತಿದೆ. ಉದ್ಯೋಗ ಸೃಷ್ಟಿಯ ಹೊಸ ಸಾಧ್ಯತೆಗಳನ್ನು ಇದು ಹುಟ್ಟು ಹಾಕುವ ಉತ್ಸಾಹದಲ್ಲಿದೆ. ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ ಎಂಬ ಹಾದಿಯಲ್ಲಿ ನಮ್ಮ ಸರ್ಕಾರವು ಮುನ್ನಡೆಯುತ್ತಿದೆ. ಜನಸಾಮಾನ್ಯರ ಜೀವನವನ್ನು ಸುಲಭಗೊಳಿಸುವುದು ಮತ್ತು ಸುಲಭ ವ್ಯವಹಾರವನ್ನು ಪರಿಚಯಿಸಲಾಗುತ್ತಿದೆ ಎಂದವರು ತಿಳಿಸಿದರು.