ಚಿತ್ರದುರ್ಗ, ಮೇ 27 (DaijiworldNews/MS): ಐತಿಹಾಸಿಕ ಮುರುಘಾ ಮಠಕ್ಕೆ ಉತ್ತರಾಧಿಕಾರಿಯಾಗಿ ಮುರುಘಾ ಮಠದಲ್ಲೇ ಅಧ್ಯಯನ ಮಾಡುತ್ತಿದ್ದ ಬಸವಾದಿತ್ಯ ಸ್ವಾಮೀಜಿಯನ್ನು ನೇಮಕ ಮಾಡಲಾಗಿದ್ದು, ಶಿವಮೂರ್ತಿ ಮುರುಘಾ ಶರಣರ ಬಳಿಕ ಬಸವಾದಿತ್ಯ ಅವರು ಪಟ್ಟಾಧಿಕಾರ ವಹಿಸಿಕೊಳ್ಳಲಿದ್ದಾರೆ.
ಮುರುಘಾ ಮಠದ ಶಿರಸಿಂಗಿ ಮಹಾಲಿಂಗ ಸ್ವಾಮಿ ಸಭಾಂಗಣದಲ್ಲಿ ನಡೆದ ಶರಣ ಸಭೆಯಲ್ಲಿ ಶುಕ್ರವಾರ ಬೆಳಿಗ್ಗೆ ಈ ಘೋಷಣೆ ಮಾಡಲಾಗಿದ್ದು, ಬಹುದಿನಗಳ ಕುತೂಹಲಕ್ಕೆ ತೆರೆಬಿದ್ದಿದೆ.
ಚಿತ್ರದುರ್ಗ ತಾಲೂಕಿನ ಹುಲ್ಲೂರು ಗ್ರಾಮದ ಚಂದ್ರಕಲಾ ಶಿವಮೂರ್ತಯ್ಯ ದಂಪತಿಗಳ ಪುತ್ರ ಬಸವಾದಿತ್ಯ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿದ್ದು, ಎಸ್ಜೆಎಂ ಕಾಲೇಜಿನಲ್ಲಿ ಇವರು ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿದ್ದಾರೆ.
ಮಾನವನ ಬದುಕು ಅಸ್ಥಿರವಾಗಿರುತ್ತದೆ. ಬಸವಣ್ಣನವರು ಹೇಳುವಂತೆ ಸಂಸಾರವೆಂಬುದು ಗಾಳಿಗಿಟ್ಟ ದೀಪ. ಅನಿರೀಕ್ಷಿತವಾಗಿ ಸಂಭವಿಸುವ ಅಪಘಾತ, ಹೃದಯಾಘಾತ ಅಥವಾ ಇನ್ನಿತರೆ ಅವಘಡಗಳಿಂದ ಮಡಿದರೆ ಮನೆಗಳಲ್ಲಿ ಇತರರು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ. ಆದರೆ ಮಠ - ಪೀಠಗಳಲ್ಲಿ ಇಂತಹ ಶೂನ್ಯ ನಿರ್ಮಾಣ ಆಗಬಾರದು. ಶೂನ್ಯವನ್ನು ಭರ್ತಿ ಮಾಡುವ ಸಲುವಾಗಿ ಸಮಾಜದ ಮುಖಂಡರ ಸಮ್ಮುಖದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬಸವಾದಿತ್ಯ ಉನ್ನತ ವ್ಯಾಸಾಂಗ ಪೂರ್ಣಗೊಂಡ ಬಳಿಕ ಪಟ್ಟ ಕಟ್ಟಲಾಗುವುದು ಎಂದು ಮುರುಘಾ ಶರಣರು ತಿಳಿಸಿದರು.