ಚೆನ್ನೈ, ಮೇ 27 (DaijiworldNews/DB): ಭಾರತೀಯ ಭಾಷೆಗಳ ಉತ್ತೇಜನಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿಯು ಪ್ರಾಮುಖ್ಯ ನೀಡುತ್ತದೆ. ತಮಿಳು ಭಾಷೆ ಮತ್ತು ಸಂಸ್ಕೃತಿಯನ್ನು ಜನಾನುರಾಗಿಯಾಗಿಸಲು ಕೇಂದ್ರ ಸರ್ಕಾರ ಬದ್ದವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ ಸಂಸ್ಥೆಯು 20 ವರ್ಷಗಳನ್ನು ಪೂರೈಸಿದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ಏರ್ಪಡಿಸಲಾದ ಬೃಹತ್ ರೋಡ್ ಶೋದಲ್ಲಿ ಭಾಗವಹಿಸಿದ ಬಳಿಕ ಜವಾಹರ್ ಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.
ನನ್ನ ಕ್ಷೇತ್ರದಲ್ಲಿರುವ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ತಮಿಳು ಅಧ್ಯಯನ ವಿಭಾಗವು ಆಸಕ್ತಿಯ ಕಲಿಕೆಗೆ ಒತ್ತು ನೀಡುತ್ತಿದೆ. ತಮಿಳು ಭಾಷೆ, ಇಲ್ಲಿನ ಸಂಸ್ಕೃತಿ ಸಿರಿವಂತಿಕೆಯುಳ್ಳದ್ದಾಗಿದೆ ಎಂದರು.
31,000 ಕೋಟಿ ರೂ.ಗಿಂತಲೂ ಹೆಚ್ಚು ಮೊತ್ತದ ವಿವಿಧ ಯೋಜನೆಗಳಿಗೆ ಈ ವೇಳೆ ಮೋದಿ ಚಾಲನೆ ನೀಡಿದರು. ಚೆನ್ನೈ ಎಗ್ಮೋರ್, ರಾಮೇಶ್ವರಂ, ಮಧುರೈ, ಕಟ್ಪಾಡಿ ಮತ್ತು ಕನ್ಯಾಕುಮಾರಿ ಸೇರಿದಂತೆ ತಮಿಳುನಾಡಿನ ಐದು ನಿಲ್ದಾಣಗಳ ಮರು ಅಭಿವೃದ್ಧಿ, ತಾಂಬರಂ-ಚೆಂಗಲ್ಪಟ್ಟು ನಡುವಿನ 30 ಕಿಮೀ ಉದ್ದದ ಮೂರನೇ ರೈಲು ಮಾರ್ಗ ಸೇರಿದಂತೆ ವಿವಿಧ ಯೋಜನೆಗಳು ಇದರಲ್ಲಿ ಸೇರಿವೆ.
ಭಾರತವು ಮೂಲ ಸೌಕರ್ಯಕ್ಕೆ ಪ್ರಾಮುಖ್ಯತೆ ನೀಡುತ್ತದೆ. ಇದರ ಅಭಿವೃದ್ದಿಯಾದರೆ ಅಂತಹ ರಾಷ್ಟ್ರಗಳು ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರದಿಂದ ಅಭಿವೃದ್ದಿ ಹೊಂದಿದ ರಾಷ್ಟ್ರವಾಗಿ ಬದಲಾಗುತ್ತದೆ ಎಂಬುದನ್ನು ಇತಿಹಾಸದಲ್ಲೇ ತಿಳಿದಿದ್ದೇವೆ. ಪ್ರತಿ ಮನೆಗೂ ಹೈಸ್ಪೀಡ್ ಇಂಟರ್ನೆಟ್ ಸೇವೆ ಒದಗಿಸುವುದು ನನ್ನ ಪ್ರಮುಖ ಗುರಿ ಎಂದು ತಿಳಿಸಿದರು.
ಶ್ರೀಲಂಕಾವನ್ನು ಬೆಂಬಲಿಸುವುದನ್ನು ಭಾರತ ಮುಂದುವರಿಸಲಿದೆ. ಭಾರತವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಶ್ರೀಲಂಕಾ ಪರವಾಗಿ ಮಾತನಾಡಿದೆ. ಅನೇಕರು ಆ ರಾಷ್ಟ್ರಕ್ಕೆ ನೆರವಿನ ಹಸ್ತ ನೀಡಿದ್ದಾರೆ ಎಂದು ಇದೇ ವೇಳೆ ಮೋದಿ ಸ್ಮರಿಸಿದರು.
ಚೆನ್ನೈನಲ್ಲಿ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರು ಪ್ರಧಾನಿಯನ್ನು ಬರಮಾಡಿಕೊಂಡರು. ತಮಿಳುನಾಡು ಸಚಿವರಾದ ದುರೈಮುರುಗನ್, ಕೆ. ಪೊನ್ಮುಡಿ, ಮೀನುಗಾರಿಕೆ ರಾಜ್ಯ ಸಚಿವ ಎಲ್. ಮುರುಗನ್ ಮತ್ತು ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಡಪ್ಪಡ್ಡಿ ಕೆ. ಪಳನಿಸ್ವಾಮಿ ಉಪಸ್ಥಿತರಿದ್ದರು. ಡಿಎಂಕೆ ಸರ್ಕಾರ ರಚನೆಯಾದ ಬಳಿಕ ತಮಿಳಿನಾಡಿಗೆ ಮೋದಿಯವರು ಇದೇ ಮೊದಲ ಬಾರಿಗೆ ಭೇಟಿ ನೀಡಿದ್ದಾರೆ.