ಬೆಂಗಳೂರು, ಮೇ 27 (DaijiworldNews/MS): ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇನ್ನೊಂದೆಡೆ ಕಾಂಗ್ರೆಸ್ ಮತ್ತು ಬಿಜೆಪಿ ಪರಸ್ಪರ ಆರೋಪ- ಪ್ರತ್ಯಾರೋಪ ಮುಂದುವರಿಸಿದೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ , " ಘಜ್ನಿ, ಘೋರಿ, ಟಿಪ್ಪು, ಔರಂಗಜೇಬ್ ಅವರಂತಹ ಮತಾಂಧರನ್ನು ವೈಭವೀಕರಿಸಿ ನಾಡಿನ ಕ್ಷಾತ್ರ ಪರಂಪರೆಯನ್ನು ಮರೆಮಾಚಿದ್ದೇಕೆ?" ಎಂದು ಕಾಂಗ್ರೆಸ್ ಅನ್ನು ಪ್ರಶ್ನಿಸಿದೆ.
ಸ್ವಾಮಿ ವಿವೇಕಾನಂದ ಅವರು, ಭಾರತ ಕಂಡ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿ ಎನಿಸಿಕೊಂಡವರು.ಶಿಕಾಗೋದಲ್ಲಿ ನಡೆದ ಸರ್ವಧರ್ಮಸಮ್ಮೇಳನದ ಮೂಲಕ ಇಡೀ ಜಗತ್ತನ್ನೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದರು.ಇಂತಹ ಮಹಾ ಪುರುಷನ ಬಗ್ಗೆ ಮಕ್ಕಳು ಓದಬಾರದು ಎಂಬ ನಿಲುವು ತೆಗೆದುಕೊಂಡಿದ್ದು ಯಾರು?ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಒನಕೆ ಓಬವ್ವ ಅವರಂತಹ ಹೆಮ್ಮೆಯ ಕನ್ನಡಿಗರ ಬಗ್ಗೆ ಪಠ್ಯಪುಸ್ತಕದಲ್ಲಿ ಉಲ್ಲೇಖಿಸದಿರುವುದು ಯಾರ ಓಲೈಕೆಗಾಗಿ? ಘಜ್ನಿ, ಘೋರಿ, ಟಿಪ್ಪು, ಔರಂಗಜೇಬ್ ಅವರಂತಹ ಮತಾಂಧರನ್ನು ವೈಭವೀಕರಿಸಿ ನಾಡಿನ ಕ್ಷಾತ್ರ ಪರಂಪರೆಯನ್ನು ಮರೆಮಾಚಿದ್ದೇಕೆ? ಎಂದು ಸರಣಿ ಪ್ರಶ್ನೆಗಳನ್ನು ಮುಂದಿಟ್ಟಿದೆ.
ಬೆಂಗಳೂರಿನ ನಿರ್ಮಾರ್ತೃ, ಬೆಂಗಳೂರಿಗೆ ಅನೇಕ ಕೆರೆಕಟ್ಟೆಗಳನ್ನು ಕಟ್ಟಿಸಿದ, ನವ ಬೆಂಗಳೂರಿಗೆ ಅಡಿಪಾಯ ಹಾಕಿದ ನಾಡಪ್ರಭು ಕೆಂಪೇಗೌಡ ಅವರ ಪಠ್ಯವನ್ನು ಕೈಬಿಟ್ಟು, ಟಿಪ್ಪುವಿನಂತಹ ಮತಾಂಧರ ಬಗ್ಗೆ ಪುಟಗಟ್ಟಲೆ ಬರೆದಿದ್ದು ಇದೇ ಕಾಂಗ್ರೆಸ್. ವಾಸ್ತವತೆಯನ್ನು ಮರೆಮಾಚಿದ್ದು ಯಾರ ಓಲೈಕೆಗಾಗಿ? ಕನ್ನಡಕ್ಕೆ ಮೊದಲ ಜ್ಞಾನಪೀಠ ತಂದುಕೊಟ್ಟ ರಾಷ್ಟ್ರಕವಿ ಕುವೆಂಪು ಅವರ ಗದ್ಯವನ್ನು ಪಠ್ಯಪುಸ್ತಕದಿಂದ ತೆಗೆದುಹಾಕಿದ್ದೇ ಕಾಂಗ್ರೆಸ್ ಸರ್ಕಾರ . ಕುವೆಂಪು ಅವರ ರಾಮಾಯಣದರ್ಶನಂ ಮಹಾಕಾವ್ಯದ ಭಾಗವನ್ನು ಸಿದ್ದರಾಮಯ್ಯ ಸರ್ಕಾರ ಕೈಬಿಟ್ಟಿತ್ತು. ರಾಮಾಯಣ ಎಂಬ ಹೆಸರನ್ನೂ ನಿಮ್ಮಿಂದ ಸಹಿಸಿಕೊಳ್ಳಲಾಗಲಿಲ್ಲವೇ ಎಂದು ಆರೋಪಿಸಿದೆ.
ನವ ಕರ್ನಾಟಕದ ನಿರ್ಮಾಣದಲ್ಲಿ ಮೈಸೂರು ಮಹಾರಾಜರ ಕೊಡುಗೆ ಅಪಾರ. ಮೈಸೂರು ಮಹಾರಾಜರ ಕಾಲದಲ್ಲಿ ಹಳೆಯ ಮೈಸೂರು ಪ್ರಾಂತವನ್ನು ಮೇಲ್ದರ್ಜೆಗೇರಿಸಿದ ಕೀರ್ತಿಯಿದೆ.ಕಲೆ ಮತ್ತು ಶಿಕ್ಷಣಕ್ಕೆ ಒತ್ತು ನೀಡಿದಂತಹ ರಾಜ ಮನೆತನದ ಮೇಲೆ ಅಕ್ರಮವಾಗಿ ದಾಳಿ ಮಾಡಿದ ಟಿಪ್ಪುವಿನ ಕತೆಯನ್ನು ನಮ್ಮ ಮಕ್ಕಳೇಕೆ ಓದಬೇಕು? ಸರ್ವಕಾಲಕ್ಕೂ ವೀರವನಿತೆ, ಕರ್ನಾಟಕದ ಹೆಮ್ಮೆ ಒನಕೆ ಓಬವ್ವ. ಕರ್ನಾಟಕದ ವೀರ ನಾರಿಯನ್ನು ಹೇಡಿಯಂತೆ ಟಿಪ್ಪುವಿನ ತಂದೆ ಹೈದರಾಲಿಯ ಸೇನೆ ಕೊಂದಿತು. ಕಾಂಗ್ರೆಸ್ ನಾಯಕರು ಟಿಪ್ಪು ಮತ್ತು ಮನೆತನವನ್ನು ಶ್ರೇಷ್ಠವೆಂದು ಪಠ್ಯಪುಸ್ತಕದಲ್ಲಿ ಬಿಂಬಿಸಿ, ಒನಕೆ ಓಬವ್ವನ ಸಾಮರ್ಥ್ಯವನ್ನು ಕಡೆಗಣಿಸಿತು ಎಂದು ಹೇಳಿದೆ.
ತನ್ನ ಖಡ್ಗದ ಮೇಲೆ ಕಾಫೀರರನ್ನು ಕೊಲ್ಲಿ ಎಂದು ಬರೆಸಿಕೊಂಡಿದ್ದ ಮತಾಂಧ ಟಿಪ್ಪು, ಮುಸಲ್ಮಾನೇತರ ಧರ್ಮದ ಜನರ ಬಗ್ಗೆ ಜಿಹಾದಿ ಮನಸ್ಥಿತಿ ಹೊಂದಿದ್ದ.ಕೊಡಗು, ಮೇಲುಕೋಟೆ, ನೆತ್ತರಕೆರೆಯಲ್ಲಿ ನರಮೇಧ ನಡೆಸಿದ್ದ.ಅಂದು ಚಿಮ್ಮಿದ ರಕ್ತದ ಕಲೆ ಇನ್ನೂ ಹಾಗೇ ಇದೆ. ಹೀಗಿರುವಾಗಲೂ ಟಿಪ್ಪುವನ್ನು ವೀರನೆಂದು ಬೋಧಿಸಬೇಕೇ? ಕಂದಾಯ ದಾಖಲೆಯಲ್ಲಿ ಕನ್ನಡವನ್ನು ತೆಗೆದು ಪರ್ಶಿಯನ್ ಭಾಷೆ ಹೇರಿದ್ದ ಟಿಪ್ಪು ಸುಲ್ತಾನನನ್ನು ಕನ್ನಡ ಪ್ರೇಮಿ ಎಂದು ಬಿಂಬಿಸಿದ ಕೀರ್ತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ. ಈ ರೀತಿ ಪಠ್ಯಪುಸ್ತಕಗಳ ಮೂಲಕ ಮಕ್ಕಳಲ್ಲಿ ಬಿತ್ತಿದ್ದ ಸುಳ್ಳನ್ನು ತೆಗೆದರೆ ವಿರೋಧವೇಕೆ ಎಂದು ಹೇಳಿದೆ.