ಬೆಂಗಳೂರು, ಮೇ 27 (DaijiworldNews/MS): 'ಆರೆಸ್ಸೆಸ್ ತತ್ವವನ್ನು ಮಕ್ಕಳ ತಲೆಗೆ ತುಂಬಲು ಹೊರಟಿರುವ ರಾಜ್ಯ ಸರ್ಕಾರದ ನಿರ್ಧಾರ ಖಂಡನೀಯ' ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಕೆಪಿಸಿಸಿ ಅಧ್ಯಕ್ಷರು, 'ದೇಶ ಹಾಗೂ ಉತ್ತಮ ಸಮಾಜದ ನಿರ್ಮಾಣಕ್ಕೆ ಶಿಕ್ಷಣ ಅಡಿಪಾಯ. ಆದರೆ ಪ್ರಸ್ತುತ ಬಿಜೆಪಿ ಸರ್ಕಾರವು ಶಿಕ್ಷಣ ಕ್ಷೇತ್ರದಲ್ಲೂ ರಾಜಕೀಯ ಮಾಡಲು ಹೊರಟಿದೆ. ನೈಜ ಇತಿಹಾಸವನ್ನು ತಿರುಚಿ, ಮುಂದಿನ ಪೀಳಿಗೆಗೆ ಹೊಸ ಇತಿಹಾಸವನ್ನು ನೀಡುವ ಕಾರ್ಯದಲ್ಲಿ ಮಗ್ನವಾಗಿದೆ. ಆರೆಸ್ಸೆಸ್ ತತ್ವವನ್ನು ಮಕ್ಕಳ ತಲೆಗೆ ತುಂಬಲು ಹೊರಟಿರುವ ರಾಜ್ಯ ಸರ್ಕಾರದ ನಿರ್ಧಾರ ಖಂಡನೀಯ' ಎಂದಿದ್ದಾರೆ
ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲೂ ಬಿಜೆಪಿ ಎಲ್ಲರ ವಿರೋಧವನ್ನು ಎದುರಿಸುತ್ತಿದೆ. ಬಿಸಿಯೂಟ ಯೋಜನೆ ಹಳ್ಳ ಹಿಡಿದಿದೆ, ಶಾಲೆಗಳಲ್ಲಿ ಮೂಲ ಸೌಕರ್ಯವಿಲ್ಲ. ಇದರ ನಡುವೆ ಎನ್ ಈ ಪಿ ಹೆಸರಿನಲ್ಲಿ ’ನಾಗ್ಪುರ ಶಿಕ್ಷಣ ನೀತಿʼ ಜಾರಿಗೆ ತರುವ ಧಾವಂತಕ್ಕೆ ರಾಜ್ಯ ಸರ್ಕಾರ ಬಿದ್ದಿದೆ ಎಂದು ಆರೋಪಿಸಿದ್ದಾರೆ
ಶಿಕ್ಷಣ ಕ್ಷೇತ್ರವನ್ನು ಮತ್ತೆ ಸರಿಯಾದ ದಾರಿಗೆ ತರುವ ನಿಟ್ಟಿನಲ್ಲಿ ಶಿಕ್ಷಣ ತಜ್ಞರು, ಸಾಹಿತಿಗಳು, ಚಿಂತಕರು ಸೇರಿದಂತೆ ಸಂಬಂಧಪಟ್ಟ ಎಲ್ಲ ವರ್ಗದವರೂ ಧ್ವನಿಗೂಡಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದೇನೆ. ಶಿಕ್ಷಣವು ಮಕ್ಕಳ ಭವಿಷ್ಯಕ್ಕೆ ಒಂದು ಭದ್ರ ಅಡಿಪಾಯ. ಆ ಅಡಿಪಾಯವು ಎಂದಿಗೂ ಅಲುಗಾಡದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ಎಚ್ಚರಿಕೆ ನೀಡಿದ್ದಾರೆ.